ಯಾದಗಿರಿ: ಕ್ವಾರಂಟೈನ್ ಕೇಂದ್ರವೊಂದರಲ್ಲಿ ಹಾವು ಮತ್ತು ಚೇಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿದ್ದ ವಲಸಿಗರು ಗಾಬರಿಗೊಂಡು ಹೊರಗಡೆ ಓಡಿ ಬಂದಿರುವ ಘಟನೆ ವಡಗೇರಾ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಅವ್ಯವಸ್ಥೆಯ ಆಗರವಾಗಿದೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರ - Morarji Desai Residential School
ಕ್ವಾರಂಟೈನ್ ಕೇಂದ್ರದಲ್ಲಿ ಹಾವು ಮತ್ತು ಚೇಳು ಪ್ರತ್ಯಕ್ಷವಾಗಿದ್ದರಿಂದ ಗಾಬರಿಗೊಂಡು ಹೊರಗಡೆ ಓಡಿ ಬಂದ ಕ್ವಾರಂಟೈನ್ ವಲಸಿಗರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
![ಅವ್ಯವಸ್ಥೆಯ ಆಗರವಾಗಿದೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರ Morarji Desai Residential School](https://etvbharatimages.akamaized.net/etvbharat/prod-images/768-512-7806346-583-7806346-1593342028149.jpg)
ಪಟ್ಟಣದ ಹೊರಭಾಗದಲ್ಲಿರುವ ಕ್ವಾರಂಟೈನ್ ಕೇಂದ್ರದ ಸುತ್ತಮುತ್ತಲು ಕಸ ತುಂಬಿಕೊಂಡಿದೆ. ಇದರಿಂದ ಈ ಕೇಂದ್ರದ ಸುತ್ತಮುತ್ತಲಿನ ಸ್ಥಳ ವಿಷಜಂತುಗಳ ಆವಾಸ ಸ್ಥಾನವಾಗಿದೆ. ಕೊರೊನಾ ಅಟ್ಟಹಾಸಕ್ಕೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಕಳೆದ ಮೂರು ತಿಂಗಳಿಂದ ಈ ವಸತಿ ಶಾಲೆಯ ಸುತ್ತಮುತ್ತಲಿನ ಸ್ಥಳ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ.
ಈ ಕ್ವಾರಂಟೈನ್ ಕೇಂದ್ರದಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ನೂರಾರು ವಲಸಿಗರಿದ್ದಾರೆ. ಆದ್ರೆ ಇಲ್ಲಿರುವ ವಲಸಿಗರು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ. ನೂರಾರು ವಲಸಿಗರ ಜೊತೆ ಚಿಕ್ಕ ಮಕ್ಕಳು ಕೂಡಾ ಕೇಂದ್ರದಲ್ಲಿ ಇರುವುದರಿಂದ ಪೋಷಕರು ಹಗಲಿರುಳು ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತಾಗಿದೆ. ಕೇಂದ್ರ ಸೇರಿದಂತೆ ಸುತ್ತಮುತ್ತಲಿನ ಸ್ಥಳ ಸ್ವಚ್ಛಗೊಳಿಸುವಂತೆ ಸಾಕಷ್ಟು ಬಾರಿ ವಲಸಿಗರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎನ್ನುತ್ತಾರೆ.