ಯಾದಗಿರಿ: ಭೀಮಾ ನದಿ ತೀರದಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳಿಗೆ ನೀರುಣಿಸಲು ಪಂಪ್‌ಸೆಟ್ ಹಾಕಿದ್ದರು. ಈ ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನ ದೂರು ಆಧರಿಸಿ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್, ಹಣಮಂತ ಹಾಗೂ ಗೋವಿಂದ ಬಂಧಿತರು.
ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಭೀಮಾ ಹಾಗೂ ಕೃಷ್ಣಾ ನದಿ ತೀರದ ರೈತರು ಅಳವಡಿಸಿದ್ದ 29 ಪಂಪ್ ಸೆಟ್ ಹಾಗೂ ಕೇಬಲ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದರು. ನದಿ ತೀರದಲ್ಲಿ ಈ ರೀತಿಯ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಯಾದಗಿರಿ ಜಿಲ್ಲಾ ಎಸ್ಪಿ ಡಾ. ವೇದಮೂರ್ತಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದರು.
ಯಾದಗಿರಿ, ವಡಗೇರಾ ಮತ್ತು ಸುರಪುರ ಸುತ್ತಲಿನ ಪ್ರದೇಶದಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ವಡಗೇರಾ ಮೂಲದ ಬೀರನಕಲ್ ತಾಂಡಾದಲ್ಲಿ 10ಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ತುಂಬಿದ ವಾಹನವನ್ನು ಕಂಡು, ಅದರಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಆರೋಪಿಗಳು ಪಂಪ್‌ಸೆಟ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ವಡಗೇರಾ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಭೀಮಾ, ಕೃಷ್ಣ ನದಿ ಭಾಗದ ರೈತರ ನಿದ್ದೆಗೆಡಿಸಿದ್ದ ಕಳ್ಳರ ಬಂಧನವಾಗಿದೆ. ಇನ್ನಾದರೂ, ನದಿ ಭಾಗದ ರೈತರು ಎಚ್ಚೆತ್ತು ಪಂಪ್ಸೆಟ್ಗೆ ಶೆಡ್ ನಿರ್ಮಾಣ ಮಾಡಿ ಅವುಗಳನ್ನು ಕಾಯ್ದುಕೊಳ್ಳಬೇಕಿದೆ ಎಂದು ಎಸ್ಪಿ ಡಾ. ವೇದಮೂರ್ತಿ ಸಲಹೆ ನೀಡಿದ್ದಾರೆ.