ಸುರಪುರ(ಯಾದಗಿರಿ):ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಸಾರ್ವಜನಿಕರ ಒತ್ತಾಯ ಸುರಪುರ ತಾಲೂಕಿನ ಲಕ್ಷ್ಮಿಪುರ, ಬೋನಾಳ, ಮಂಗಳೂರು ಸೇರಿ ಅನೇಕ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರ್ಕಾರ ಮಂಜೂರು ಮಾಡಿತ್ತು. ಆದರೆ, ಜಿಲ್ಲಾ ಪಂಚಾಯತ್ ಕುಡಿಯುವ ನೀರು ಸರಬರಾಜು ವಿಭಾಗದಿಂದ ಘಟಕಗಳ ನಿರ್ವಹಣೆ ಆಗುತ್ತಿಲ್ಲ. ಇದರಿಂದಾಗಿ ಗ್ರಾಮಗಳಲ್ಲಿನ ನೀರಿನ ಘಟಕಗಳು ಬಂದ್ ಆಗಿ ವರ್ಷಗಳೇ ಕಳೆದಿವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಘಟಕಗಳ ದುರಸ್ಥಿಗೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಿಪುರ ಗ್ರಾಮದಲ್ಲಿ 1 ವರ್ಷದ ಹಿಂದೆ ಘಟಕ ನಿರ್ಮಿಸಲಾಗಿದೆ. ಆದರೆ, ಈವರೆಗೂ ಕೂಡ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿಲ್ಲ. ಘಟಕ ನಿರ್ಮಿಸಿದಾಗ ಹಾಕಿರುವ ಬೀಗ ಕೂಡ ತೆಗೆದಿಲ್ಲ. ಕಾಟಾಚಾರಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ. ಜನ ಕಲುಷಿತ ನೀರನ್ನು ಕುಡಿಯುವ ದುರ್ಗತಿ ಬಂದಿದೆ ಎಂದು ವೀರಶೈವ-ಲಿಂಗಾಯತ ವೇದಿಕೆಯ ರಾಜ್ಯ ಸಂಚಾಲಕ ಚಂದ್ರಶೇಖರ್ ಡೋಣೂರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಮತ್ತು ನಿರ್ಲಕ್ಷದ ಕುರಿತು ಅನೇಕ ಸಂಘ-ಸಂಸ್ಥೆಗಳು ಪ್ರತಿಭಟಿಸಿದ್ದವು. ಜೊತೆಗೆ ಕುಡಿಯುವ ನೀರು ಸರಬರಾಜು ವಿಭಾಗಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಈವರೆಗೆ ದುರಸ್ಥಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ತಾಲೂಕಿನ ಜನರಲ್ಲಿ ಬೇಸರ ಉಂಟು ಮಾಡಿದೆ.