ಸುರಪುರ (ಯಾದಗಿರಿ): ಸುರಪುರ ತಾಲೂಕಿನ ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರ ಎಂದು ಘೋಷಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೆಂಭಾವಿ ತಾಲೂಕು ಹೋರಾಟ ಸಮಿತಿಯ ಯುವ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕನ್ನಡಪರ ದಲಿತಪರ ಮತ್ತು ರೈತಪರ ಸೇರಿದಂತೆ ಅನೇಕ ಸಂಘಟನೆಗಳು ಭಾಗವಹಿಸಿದ್ದವು.
ತಾಲೂಕು ಕೇಂದ್ರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಸಾವಿರಕ್ಕೂ ಹೆಚ್ಚು ಜನ ಹೋರಾಟಗಾರರು ಸರ್ಕಾರದ ವಿಳಂಬ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ, ನಾವು 30 ವರ್ಷಗಳಿಂದ ಹೋರಾಟ ಮಾಡುತ್ತಾ ಕೆಂಭಾವಿ ತಾಲೂಕು ಎಂದು ಘೋಷಣೆ ಮಾಡಲು ಒತ್ತಾಯಿಸುತ್ತಿದ್ದೇವೆ. ಈಗ ಯುವ ಘಟಕದ ನೇತೃತ್ವದಲ್ಲಿ ಹೋರಾಟ ಆರಂಭಿಸಿದ್ದು ಶೀಘ್ರದಲ್ಲಿ ಕೆಂಭಾವಿ ತಾಲೂಕು ಎಂದು ಘೋಷಿಸದಿದ್ದಲ್ಲಿ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಜೊತೆಗೆ ಅಧಿವೇಶನದಲ್ಲಿಯೇ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಹೋರಾಟದಲ್ಲಿ ಪ್ರಮುಖರಾದ ಮುದನೂರ ಕಂಠಿ ಮಠದ ಸಿದ್ದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಹೋರಾಟ ಸಮಿತಿ ಯುವ ಘಟಕದ ಅಧ್ಯಕ್ಷ ಡಿಸಿಪಾಟೀಲ, ಪರಶುರಾಮ ಬಳಬಟ್ಟಿ, ಬಾವಸಾಬ್ ನದಾಫ್, ಗುಂಡಾಭಟ್ ಜೋಶಿ, ಶರಣಪ್ಪ ಪೂಜಾರಿ, ಪ್ರಶಾಂತ ದೊಡ್ಮನಿ, ಲಾಲಪ್ಪ ಹೊಸಮನಿ, ಕೃಷ್ಣ ತಳವಾರ ಸಾಯಿಬಣ್ಣ ಎಂಟಮನೆ ಸೇರಿದಂತೆ ಸಾವಿರಾರು ಜನರಿದ್ದರು.