ಯಾದಗಿರಿ: ಹೆತ್ತ ತಂದೆ-ತಾಯಿಯನ್ನು ಮಕ್ಕಳು ಪೋಷಿಸದ ಕಾರಣ ಪೋಷಕರಿಗೇ ಆಸ್ತಿ ವರ್ಗಾವಣೆ ಮಾಡಿದ ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಶಹಾಪುರ ತಾಲೂಕಿನ ಶಿರವಾಳ ಗ್ರಾಮದ ನಿವಾಸಿ ರವೀಂದ್ರನಾಥ ಹಿರೇಮಠ ಅವರು, ತಮ್ಮ ಮಕ್ಕಳಿಗೆ ನೀಡಿದ್ದ 10 ಎಕರೆ 12 ಗುಂಟೆ ಜಮೀನು ಹಾಗೂ ಗುರುಮಠಕಲ್ ತಾಲೂಕಿನ ಧರ್ಮಪುರ ಗ್ರಾಮದ ಶಂಕ್ರಮ್ಮ ಅವರು, ತಮ್ಮ ನಾಲ್ವರು ಮಕ್ಕಳು ತಮ್ಮನ್ನು ಪೋಷಣೆ ಮಾಡದ ಕಾರಣಕ್ಕೆ 4 ಎಕರೆ ಜಮೀನನ್ನು ತಮಗೆ ಮರಳಿ ಒಪ್ಪಿಸುವಂತೆ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇವೆರಡೂ ಪ್ರಕರಣಗಳನ್ನು ಪರಿಶೀಲಿಸಿದ ಯಾದಗಿರಿಯ ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಹಿರಿಯ ನಾಗರಿಕರ ನ್ಯಾಯ ಮಂಡಳಿ 2007ರ ಕಾಯ್ದೆಯಂತೆ ಮರಳಿ ಆಸ್ತಿ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಪ್ರಕರಣದ ವಿವರ: ರವೀಂದ್ರನಾಥ ಹಿರೇಮಠ ಅವರಿಗೆ ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಪತ್ನಿ ಮೃತಪಟ್ಟಿದ್ದಾರೆ. ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಿಲ್ಲ. ಇದರಿಂದ ನಾನು ದಾನವಾಗಿ ನೀಡಿದ ಶಿರವಾಳ ಗ್ರಾಮದ ಸರ್ವೇ ಸಂಖ್ಯೆ 47ರ 10 ಎಕರೆ 12 ಗುಂಟೆ ಹಾಗು ಗ್ರಾಮದ ಸರ್ವೇ ಸಂಖ್ಯೆ 199ರ 28 ಎಕರೆ 35 ಗುಂಟೆ ಮಕ್ಕಳ ಹೆಸರಿನಲ್ಲಿ ಖರೀದಿಸಿದ್ದ ಜಮೀನು ವಾಪಸ್ ನೀಡಬೇಕು ಎಂದು ಕೋರಿದ್ದರು. ಉಪ ವಿಭಾಗಾಧಿಕಾರಿ ಶಾಲಂ ಹುಸೇನ್ ಅವರು, 2021ರ ಅ. 29, ನ.6, 2022ರ ಜ.4, ಫೆ.1, ಏಪ್ರಿಲ್ 8, ಮೇ 18ರಂದು ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದರು. ಬಳಿಕ ದಾನ ಪತ್ರ ಶೂನ್ಯಗೊಳಿಸಿ ಆದೇಶ ನೀಡಿದ್ದಾರೆ.