ಸುರಪುರ:ಕೆಂಭಾವಿ ಪಟ್ಟಣದ ವಿದ್ಯಾರ್ಥಿನಿ ಪ್ರಿಯಾ ಭೋವಿ ವಡ್ಡರ್ ಗುಡಿಸಲಲ್ಲಿ ಅರಳಿದ ಪ್ರತಿಭೆ. ಬೀದಿ ದೀಪದ ಕೆಳಗೆ ಓದಿ ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 616 ಅಂಕ ಪಡೆದ ಈ ಪ್ರತಿಭೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ಬೇಕಿದೆ.
ಸುರಪುರ: ಎಸ್‌ಎಸ್‌ಎಲ್‌ಸಿಯಲ್ಲಿ ರ್ಯಾಂಕ್ ಪಡೆದ ಬಡ ವಿದ್ಯಾರ್ಥಿಗೆ ಬೇಕಿದೆ ನೆರವಿನ ಸಹಾಯಸ್ತ ಇಂದು ಅನೇಕ ಜನ ವಿದ್ಯಾರ್ಥಿಗಳು ಎಲ್ಲ ಸೌಲಭ್ಯಗಳಿದ್ದರೂ ಸಹ ಓದದೆ ಪೋಲಿ ಅಲೆಯುವುದನ್ನು ಕಂಡಿರುತ್ತೇವೆ. ಹೆತ್ತವರು ಮಕ್ಕಳು ಕಲಿಯಲೆಂದು ಎಲ್ಲಾ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿದರೂ ಸಹ ಓದದೆ, ಬರೆಯದೆ ಅಲೆಯುವ ವಿದ್ಯಾರ್ಥಿಗಳಿಗೆ ಮಾದರಿಯಾಗಿ, ಹತ್ತನೇ ತರಗತಿಯಲ್ಲಿ ತನ್ನದೇ ಆದ ಸಾಧನೆ ಮಾಡಿರುವ ವಿದ್ಯಾರ್ಥಿನಿ ಪ್ರಿಯಾ ಭೋವಿ ವಡ್ಡರ್ ಬದುಕಿನ ಕತೆಯಿದು.
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಒಂದು ಪುಟ್ಟ ಗುಡಿಸಲಲ್ಲೇ ಜನಿಸಿ ಬೀದಿ ದೀಪದ ಕೆಳಗೆ ಛಲದಿಂದ ಓದಿದ ಸಾಧಕಿ ಈ ಪ್ರಿಯಾ. ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ನಾಲ್ಕನೆಯ ಱಂಕ್ ಹಾಗೂ ಸುರಪುರ ತಾಲೂಕಿಗೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಪ್ರಿಯಾ ಭೋವಿ ವಡ್ಡರ್ ಈಗ ಸಹಾಯಕ್ಕಾಗಿ ಸಹೃದಯಿಗಳ ನೆರವಿಗೆ ಮೊರೆಯಿಟ್ಟಿದ್ದಾಳೆ.
ತಾಯಿ ಮೀನಾಕ್ಷಿ ಅನಕ್ಷರಸ್ಥೆ, ತಂದೆಭೀಮಣ್ಣ ಬೋವಿ ವಡ್ಡರ್, ಪಿಯುಸಿ ಅನುತ್ತೀರ್ಣನಾಗಿ ನಂತರ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಹೃದಯ ಸಂಬಂಧಿ ಕಾಯಿಲೆ ಅವರನ್ನು ಕಾಡುತ್ತಿದೆ. ತಾಯಿಗೂ ಆಗಾಗ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇವರಿಗೆ 5 ಜನ ಹೆಣ್ಣು ಮಕ್ಕಳು ಅದರಲ್ಲಿ ಮೊದಲನೇ ಮಗಳು ಮೂಗಿ, 3ನೇ ಮಗಳೆ ಈ ಸಾಧಕಿ ಪ್ರಿಯಾ.
ಪ್ರಿಯಾ ಮೊದಲಿನಿಂದಲೂ ಓದಿನಲ್ಲಿ ಮುಂದೆ ಇದ್ದು, ಈಗ ಕೆಂಭಾವಿ ಪಟ್ಟಣದ ಶ್ರೀ ಹೆಮರಡ್ಡಿ ಮಲ್ಲಮ್ಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿಯಲ್ಲಿ 616 (ಪ್ರತಿಶತ 98%) ಅಂಕ ಪಡೆದು ಸುರಪುರ ತಾಲೂಕಿಗೆ ಪ್ರಥಮ ಹಾಗೂ ಯಾದಗಿರಿ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ.
ಮಗಳ ಕುರಿತು ತಾಯಿ ಮೀನಾಕ್ಷಿ ಮಾತನಾಡಿ, 5 ಜನ ಹೆಣ್ಣು ಮಕ್ಕಳನ್ನು ತಂದೆ ದುಡಿದು ಸಾಕುವುದರಲ್ಲೇ ಹೈರಾಣಾಗಿದ್ದಾರೆ. ಅವರಿಗೂ ಹೃದಯ ಸಂಬಂಧಿ ಕಾಯಿಲೆ ಇದೆ. ನನಗೂ ಆರೋಗ್ಯದ ಸಮಸ್ಯೆಯಿದೆ. ನಮ್ಮ ಮಕ್ಕಳಿಗೆ ಒಂದು ದಿನವೂ ಟ್ಯೂಷನ್ ಮತ್ತಿತರೆ ಓದಿಗೆ ಕಳುಹಿಸಲು ಶಕ್ತಿ ಇರಲಿಲ್ಲ. ಇದರ ಮಧ್ಯೆ ಓದಲು ಮಕ್ಕಳಿಗೆ ಮನೆಯು ಚಿಕ್ಕ ಗುಡಿಸಲಾಗಿದ್ದರಿಂದ ಮನೆಯ ಮುಂದಿನ ಬೀದಿ ದೀಪದ ಕೆಳಗೆ ರಾತ್ರಿ ಒಬ್ಬಳೇ ಕುಳಿತು ಓದಿ ಈ ಸಾಧನೆ ಮಾಡಿದ್ದಾಳೆ. ನಾವು ಇಂತಹ ಮಗಳನ್ನು ಪಡೆಯಲು ಪುಣ್ಯ ಮಾಡಿದ್ದೆವು ಅನಿಸುತ್ತಿದೆ ಎನ್ನುವಾಗ ಅವರ ಕಣ್ಣಾಲೆಗಳು ತುಂಬಿದ್ದವು.
ವಿದ್ಯಾರ್ಥಿನಿ ಪ್ರಿಯಾ ಮಾತನಾಡಿ, ನನ್ನ ತಂದೆ ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿದ್ದರು. ಅಲ್ಲದೆ ಕೊರಾನಾದಿಂದಾಗಿ ಪರೀಕ್ಷೆ ನಡೆಯುವ ಬಗ್ಗೆ ಅನುಮಾನವಿತ್ತು. ಇದರಿಂದ ನನ್ನ ಓದಿಗೆ ಸ್ವಲ್ಪ ಸಮಸ್ಯೆಯುಂಟಾಯಿತು. ಇಲ್ಲದಿದ್ದರೆ ಪ್ರತಿಶತ 100 ರಷ್ಟು ಅಂಕ ಪಡೆಯುತ್ತಿದ್ದೆ ಎನ್ನುವಲ್ಲಿ ಅವರಲ್ಲಿಯ ಓದಿನ ಛಲದ ಬಗ್ಗೆ ಹೆಮ್ಮೆ ಮೂಡುತ್ತದೆ. ಈಗ ಮುಂದೆ ವಿಜ್ಞಾನ ವಿಭಾಗದಿಂದ MBBS ಸೇರಿ (MD) ಮಾಸ್ಟರ್ ಡಿಗ್ರಿ ಮಾಡಬೇಕೆಂಬ ಮಹದಾಸೆಯಿದೆ. ಆದರೆ ಮನೆಯಲ್ಲಿನ ಕಡು ಬಡತನ ಅವಳ ಓದಿಗೆ ಪೂರಕವಾಗಿಲ್ಲ. ಇಂತಹ ಪ್ರತಿಭೆಯ ನೆರವಿಗೆ ನಾಡಿನ ಹೃದಯವಂತರು ನೆರವಿನ ಹಸ್ತ ಚಾಚಬೇಕಿದೆ. ಹೆತ್ತವರು ಮಕ್ಕಳನ್ನು ಸಾಕುವುದರಲ್ಲೇ ಹೈರಾಣಾಗುತ್ತಿದ್ದಾರೆ.
ಈ ಕುಟುಂಬಕ್ಕೆ ನೆರವಾಗುವ ಮೂಲಕ ಪ್ರಿಯಾನಂತಹ ಪ್ರತಿಭಾವಂತರು ವೈದ್ಯ ಲೋಕ ಬೆಳಗಲು ಸಹಕರಿಸಬೇಕಿದೆ. ಅಲ್ಲದೆ ಸರ್ಕಾರವು ಕೂಡ ಈ ಕುಟುಂಬಕ್ಕೆ ನೆರವಾಗಬೇಕಿದೆ. ಕಳೆದ 15 ವರ್ಷಗಳಿಂದ ಒಂದು ಪುಟ್ಟ ತಗಡಿನ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಭೀಮಣ್ಣ ಬೋವಿವಡ್ಡರ್ ಕುಟುಂಬಕ್ಕೆ ಸ್ಥಳೀಯ ಪುರಸಭೆಯಾಗಲಿ, ಆಳುವ ಜನಪ್ರತಿನಿಧಿಗಳಾಗಲಿ ಈವರೆಗೆ ಒಂದು ಮನೆಯನ್ನೂ ಕಲ್ಪಿಸದಿರುವುದು ನೋವಿನ ಸಂಗತಿಯ ಜೊತೆಗೆ ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು.
ಇನ್ನಾದರೂ ಈ ಕುಟುಂಬಕ್ಕೆ ಒಂದು ಸೂರು ದೊರೆಯಲಿ. ಜೊತೆಗೆ ವಿದ್ಯಾರ್ಥಿನಿ ಪ್ರಿಯಾ ಭೋವಿ ವಡ್ಡರ್ ಅವರ ಓದಿಗೆ ಮಾನವೀಯ ಮನಸ್ಸುಗಳು ನೆರವಾಗಲಿ ಎಂಬುದು ಈಟಿವಿ ಭಾರತ ಕಳಕಳಿಯಾಗಿದೆ.