ಯಾದಗಿರಿ:ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಉತ್ತರ ಭಾಗದ ಜಿಲ್ಲೆಯಾದ ಯಾದಗಿರಿಗೆ ಇಂದು ಭೇಟಿ ನೀಡಿದ್ದು, ಸುಮಾರು 10,800 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮುನ್ನ, ಪ್ರಧಾನಿ ನಾರಾಯಣಪುರ ಎಡದಂಡೆ ಕಾಲುವೆ-ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ ಯೋಜನೆಗೆ ಚಾಲನೆ ಕೊಟ್ಟರು.
ರಾಜ್ಯಕ್ಕೆ 10,800 ಕೋಟಿ ರೂ ವೆಚ್ಚದ ಅಭಿವೃದ್ಧಿ ಯೋಜನೆ: ಪ್ರಧಾನಿ ಮೋದಿ ಕರ್ನಾಟಕಕ್ಕೆ 10 ಸಾವಿರದ 800 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದಾರೆ. ಯಾದಗಿರಿಯ ಕೊಡೆಕಲ್ನಲ್ಲಿ ನೀರಾವರಿ, ಕುಡಿಯುವ ನೀರು ಹಾಗೂ ಇತರೆ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದ್ದಾರೆ. ನೀರಾವರಿ ಯೋಜನೆಯಿಂದ 3 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆಯಲಿದ್ದಾರೆ. ಇನ್ನೊಂದೆಡೆ, ಕುಡಿಯುವ ನೀರಿನ ಯೋಜನೆಯ ಮೂಲಕ 2 ಲಕ್ಷ 30 ಸಾವಿರ ಮನೆಗಳಿಗೆ ಕುಡಿಯುವ ನೀರು ತಲುಪಲಿದೆ. ಇದಲ್ಲದೇ, ಸೂರತ್-ಚೆನ್ನೈ ಎಕ್ಸ್‌ಪ್ರೆಸ್‌ವೇ ಭಾಗವಾಗಿರುವ ಹೆದ್ದಾರಿ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು.
ಕನ್ನಡ ಭಾಷೆಯಲ್ಲಿ ಶುಭಾಶಯ ಕೋರಿದ ಮೋದಿ: ಸಾರ್ವಜನಿಕ ಸಭೆಗೆ ಆಗಮಿಸಿದ ಜನರಿಗೆ ಪ್ರಧಾನಿ ಮೋದಿ ಕನ್ನಡ ಭಾಷೆಯಲ್ಲಿಯೇ ಶುಭಾಶಯ ಕೋರಿದರು. ಯಾದಗಿರಿಯ ನಾಡು ಶ್ರೀಮಂತ ಪರಂಪರೆ ಹೊಂದಿದೆ ಎಂದು ಬಣ್ಣಿಸಿದರು. ಪೆಂಡಾಲ್ ಚಿಕ್ಕದಾಗಿದೆ ಎಂದ ಅವರು, ಕೆಲವರು ಬಿಸಿಲಲ್ಲಿ ನಿಂತಿದ್ದಾರೆ. ನಾನು ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮ ಬೆಂಬಲ ಮತ್ತು ಪ್ರೀತಿ ನಮಗೆ ಅರ್ಥವಾಗಿದೆ ಎಂದರು.
ಯಾದಗಿರಿ ಐತಿಹಾಸಿಕ ಮತ್ತು ಪಾರಂಪರಿಕ ಭೂಮಿ: ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, ಸ್ನೇಹಿತರೇ, ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ. ಯಾದಗಿರಿ ಶ್ರೇಷ್ಠ ಇತಿಹಾಸ ಹೊಂದಿದೆ. ಅದ್ಭುತವಾದ ಸ್ಮಾರಕಗಳು ಮತ್ತು ಶ್ರೀಮಂತ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಈ ನೆಲ ಹೊಂದಿದೆ. ಈ ಸ್ಥಳದಲ್ಲಿ ರಾಜ ವೆಂಕಟಪ್ಪ ನಾಯಕನ ಮಹಾನ್ ಆಳ್ವಿಕೆಯು ಇತಿಹಾಸದಲ್ಲಿ ಅದ್ಭುತವಾದ ಗುರುತು ಹೊಂದಿದೆ. ಯಾದಗಿರಿಯ ಐತಿಹಾಸಿಕ ಮತ್ತು ಪಾರಂಪರಿಕ ಭೂಮಿಗೆ ನಾನು ತಲೆಬಾಗುತ್ತೇನೆ ಎಂದು ಹೇಳಿದರು.
ಸೂರತ್-ಚೆನ್ನೈ ಎಕಾನಮಿ ಕಾರಿಡಾರ್‌ಗೆ ಶಂಕುಸ್ಥಾಪನೆ: ಕರ್ನಾಟಕದ ಮೂಲಕ ಹಾದು ಹೋಗುವ ಸೂರತ್-ಚೆನ್ನೈ ಆರ್ಥಿಕ ಕಾರಿಡಾರ್‌ನ ಕೆಲಸ ಪ್ರಾರಂಭವಾಗಿದೆ. ಇದರೊಂದಿಗೆ ಯಾದಗಿರಿ, ರಾಯಚೂರು, ಕಲಬುರ್ಗಿ ಸೇರಿದಂತೆ ಇಡೀ ಪ್ರದೇಶದಲ್ಲಿ ‘ಈಸ್ ಆಫ್ ಡೂಯಿಂಗ್ ಬಿಸ್ನೆಸ್' ಕೂಡ ಹೆಚ್ಚಲಿದ್ದು, ಉದ್ಯೋಗಕ್ಕೆ ಉತ್ತೇಜನ ದೊರೆಯಲಿದೆ. ಈ ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ಕರ್ನಾಟಕದ ಜನತೆಗೆ ಅಭಿನಂದನೆಗಳು ಎಂದರು.
ಹಿಂದುಳಿದಿರುವ ಜಿಲ್ಲೆಗಳ ಅಭಿವೃದ್ಧಿ, ಉತ್ತಮ ಆಡಳಿತ: ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟಬೇಕಿದೆ. ದೇಶದ ಪ್ರತಿಯೊಬ್ಬ ಪ್ರಜೆ, ಪ್ರತಿ ಕುಟುಂಬ, ಪ್ರತಿ ರಾಜ್ಯವೂ ಈ ಅಭಿಯಾನಕ್ಕೆ ಕೈಜೋಡಿಸಿದಾಗ ಭಾರತ ಅಭಿವೃದ್ಧಿ ಹೊಂದಬಹುದು. ನಮ್ಮ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕಲ್ಲ, ಅಭಿವೃದ್ಧಿಗಾಗಿದೆ. ಡಬಲ್ ಇಂಜಿನ್ ಸರ್ಕಾರಗಳು ಹಿಂದುಳಿದ ಜಿಲ್ಲೆಗಳಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನು ತಂದಿದ್ದೇವೆ. ದೇಶದ 100 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಯಾದಗಿರಿ ಕೂಡ ಒಂದು. 100 ಜಿಲ್ಲೆಗಳಲ್ಲಿ ಮೊದಲ 10 ಜಿಲ್ಲೆಗಳಲ್ಲಿ ಯಾದಗಿರಿ ಬಂದಿದೆ. ಇದಕ್ಕಾಗಿ ನಾನು ಯಾದಗಿರಿಯ ಜಿಲ್ಲಾಧಿಕಾರಿ ಮತ್ತು ಇತರ ಆಡಳಿತ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಕಾರ್ಯ ಶ್ಲಾಘನೀಯ: ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಶ್ಲಾಘನೀಯ. ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಾಚರಿಸುತ್ತಿದ್ದು ಮುಂಬರುವ ದಿನಗಳಲ್ಲಿ ಹೆಚ್ಚು ಉತ್ಸಾಹದಿಂದ ಮುನ್ನಡೆಯುವ ಸಮಯ ಬರಲಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಮುಂದಿನ 25 ವರ್ಷ 'ಅಮೃತ್ ಕಾಲ’: ಭಾರತವು ನಿಜವಾದ ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಸಾಗುತ್ತದೆ. ರೈತರಿಂದ ಉದ್ಯಮಿಗಳವರೆಗೆ ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನದಿಂದ ಮಾತ್ರ ಇದು ಸಾಕಾರಗೊಳ್ಳುತ್ತದೆ. ಪ್ರತಿಯೊಬ್ಬರೂ ಮುಂದೆ ಬಂದು ತಮ್ಮ ಕೈಲಾದದ್ದನ್ನು ನೀಡಬೇಕು. ಮುಂದಿನ 25 ವರ್ಷಗಳು ಪ್ರತಿಯೊಬ್ಬ ನಾಗರಿಕರಿಗೆ, ಪ್ರತಿ ರಾಜ್ಯಕ್ಕೆ 'ಅಮೃತ ಕಾಲ' ಬರುತ್ತದೆ. 'ಕೃಷಿ' ಮತ್ತು 'ಕಾರ್ಖಾನೆ' ಎರಡೂ ಸಮೃದ್ಧವಾಗಿದ್ದಾಗ ಮಾತ್ರ ಭಾರತವು 'ಅಭಿವೃದ್ಧಿ'ಯಾಗಲು ಸಾಧ್ಯ ಎಂದರು.
11 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು: 3.5 ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಪ್ರಾರಂಭವಾದಾಗ 18 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು. ಇಂದು ದೇಶದ ಸುಮಾರು 11 ಕೋಟಿ ಗ್ರಾಮೀಣ ಕುಟುಂಬಗಳು ನಲ್ಲಿ ನೀರು ಪಡೆಯುತ್ತಿವೆ. ಡಬಲ್ ಇಂಜಿನ್ ಸರ್ಕಾರ ಎಂದರೆ ಡಬಲ್ ಕಲ್ಯಾಣ. ಇದರಿಂದ ಕರ್ನಾಟಕಕ್ಕೆ ಯಾವ ರೀತಿ ಲಾಭವಾಗುತ್ತಿದೆ ಎಂಬುದನ್ನು ನೋಡಬಹುದು. ಹಿಂದಿನ ಸರ್ಕಾರಗಳು ಯಾದಗಿರಿ ಮತ್ತು ಉತ್ತರ ಕರ್ನಾಟಕದ ಸುತ್ತಮುತ್ತಲಿನ ಪ್ರದೇಶಗಳನ್ನು ಹಿಂದುಳಿದ ಪ್ರದೇಶವೆಂದು ಘೋಷಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಇಲ್ಲಿನ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಅಭಿವೃದ್ಧಿ ಮಂತ್ರದ ಮೇಲೆ ಕೇಂದ್ರೀಕರಿಸಿದೆ: ನಮ್ಮ ದೇಶದಲ್ಲಿ ದಶಕಗಳಿಂದ, ಕೋಟ್ಯಂತರ ಸಣ್ಣ ರೈತರು ಸಹ ಎಲ್ಲಾ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅವರನ್ನು ಸರ್ಕಾರದ ನೀತಿಗಳಲ್ಲಿ ಸಹ ಕಾಳಜಿ ವಹಿಸಲಾಗಿಲ್ಲ. ಇಂದು, ಈ ಸಣ್ಣ ರೈತ ದೇಶದ ಕೃಷಿ ನೀತಿಯ ದೊಡ್ಡ ಆದ್ಯತೆಯಾಗಿದೆ. ನಮ್ಮ ಸರ್ಕಾರವು ‘ವೋಟ್ ಬ್ಯಾಂಕ್ ರಾಜಕಾರಣ’ದತ್ತ ಗಮನಹರಿಸದೆ ‘ಅಭಿವೃದ್ಧಿ’ ಎಂಬ ಮಂತ್ರದ ಮೇಲೆ ಕೇಂದ್ರೀಕೃತವಾಗಿದೆ. ಹಿಂದಿನ ಸರಕಾರಗಳು ಈ ಭಾಗದ ಹಿಂದುಳಿದಿರುವಿಕೆಯನ್ನು ಹೋಗಲಾಡಿಸುವ ಯೋಚನೆಯನ್ನೂ ಮಾಡಿರಲಿಲ್ಲ. ಅವರು ಇಲ್ಲಿ ಹೂಡಿಕೆ ಮಾಡಲು ಅಥವಾ ಯಾವುದೇ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಚಿಂತಿಸಲಿಲ್ಲ. ಯಾದಗಿರಿಯೊಂದಿಗೆ ನಾವು ದೇಶದ 100 ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ 'ಉತ್ತಮ ಆಡಳಿತ'ದ ಸಾಧ್ಯತೆಗಳನ್ನು ತಂದಿದ್ದೇವೆ. 2014ರಿಂದ ಈ ಜಿಲ್ಲೆಗಳಲ್ಲಿ ಅಭೂತಪೂರ್ವ ಅಭಿವೃದ್ಧಿಯಾಗಿದೆ ಎಂದು ಮಾಹಿತಿ ನೀಡಿದರು.
ಯಾದಗಿರಿಯಿಂದ ದ್ವಿದಳ ಧಾನ್ಯಗಳು ದೇಶಾದ್ಯಂತ ತಲುಪುತ್ತವೆ: ಯಾದಗಿರಿ ಭಾರತದ ನಾಡಿ ಬೌಲ್ ಆಗಿದ್ದು, ಇಲ್ಲಿಂದ ಬೇಳೆಕಾಳುಗಳು ದೇಶದಾದ್ಯಂತ ತಲುಪುತ್ತವೆ. ಕಳೆದ 7-8 ವರ್ಷಗಳಲ್ಲಿ ಭಾರತವು ಬೇಳೆಕಾಳುಗಳಿಗೆ ವಿದೇಶಿ ಅವಲಂಬನೆ ಕಡಿಮೆಯಾಗಿದೆ. ಅದರಲ್ಲಿ ಉತ್ತರ ಕರ್ನಾಟಕದ ರೈತರ ಪಾತ್ರ ದೊಡ್ಡದಾಗಿದೆ. ಯಾದಗಿರಿಯಲ್ಲಿ ಶೇ.100ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಈ ಭಾಗದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂದರು. ಪಿಎಂ ಮೋದಿ ಭಾಷಣ ಮುಗಿಸಿ ನೇರವಾಗಿ ಕಲಬುರಗಿಯತ್ತ ಪ್ರಯಾಣ ಬೆಳೆಸಿದ್ದಾರೆ. ಮೋದಿ ಸ್ಥಳದಿಂದ ನಿರ್ಗಮಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರು ಜೈಕಾರ ಕೂಗಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತವರಿನಲ್ಲಿ ಪ್ರಧಾನಿ ಮೋದಿ ಹವಾ: ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್