ಯಾದಗಿರಿ: ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಬೆಳೆಯುತ್ತಿದ್ದರೂ ಜನರು ಇನ್ನೂ ಮೌಢ್ಯತೆಯಿಂದ ಹೊರಬಂದಿಲ್ಲ. ಏನಾದರು ಕಹಿ ಘಟನೆಯಾದರೆ ಸಾಕು ದೇವರ ಶಾಪ ಎಂದು ಜನರು ದೇವರ ಮೊರೆ ಹೋಗುತ್ತಾರೆ. ಅಂತಹ ಘಟನೆಯು ಈಗ ಅನಪುರನಲ್ಲಿ ಕಾಣಿಸುತ್ತಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮವು ರಾಜ್ಯದ ಗಡಿಭಾಗದ ಗ್ರಾಮವಾಗಿದೆ. ತೆಲಂಗಾಣಕ್ಕೆ ಅಂಟಿಕೊಂಡಿರುವ ಅನಪುರ ಗ್ರಾಮದಲ್ಲಿ ಜನರು ದೇವಿಯ ಶಾಪ ತಟ್ಟಿದೆ ಎನ್ನುತ್ತಿದ್ದಾರೆ. ಗಡಿಗ್ರಾಮವಾದ ಅನಪುರ ಈಗ ರಾಜ್ಯ ಮಟ್ಟದಲ್ಲಿ ವಾಂತಿ ಭೇದಿಯ ಕಹಿ ಘಟನೆಯಿಂದ ಸದ್ದು ಮಾಡುತ್ತಿದೆ.
ನಾಲ್ಕು ದಿನಗಳಿಂದ ಇನ್ನೂ ವಾಂತಿ ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಗ್ರಾಮದ ಜನರಿಗೆ ಪೂರೈಕೆ ಮಾಡಬೇಕಾದ ನೀರಿನ ಪೈಪ್ನಲ್ಲಿ ಕಲುಷಿತ ನೀರು ಸೇರ್ಪಡೆಯಾಗಿದೆ. ಪರಿಣಾಮ ನೀರು ಸೇವಿಸಿ ವಾಂತಿ ಭೇದಿಯಿಂದ ಮೂವರು ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 80 ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, 50 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡವರು ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿ ಊರು ಸೇರಿದ್ದಾರೆ.
ಗಂಡಾಂತರ ಬಾರದಂತೆ ದೇವಿಯ ಮೊರೆ:ಈಗಾಗಲೇ ನೀರಿನ ಲ್ಯಾಬ್ ರಿಪೋರ್ಟ್ ಕೂಡ ಬಂದಿದ್ದು, ನಾಲ್ಕು ನೀರಿನ ಸ್ಯಾಂಪಲ್ ಲ್ಯಾಬ್ ರಿಪೋರ್ಟ್ ನೀರು ಕುಡಿಯಲು ಯೋಗ್ಯವಲ್ಲ ಎಂದು ಬಂದಿದ್ದು ಆಘಾತಕಾರಿಯಾಗಿದೆ. ಆದರೆ, ಈಗಾಗಲೇ ಗ್ರಾಮದಲ್ಲಿ ಆರೋಗ್ಯ ಇಲಾಖೆ, ಪಂಚಾಯತ್ ಅಧಿಕಾರಿಗಳು ಠಿಕಾಣಿ ಹೂಡಿ, ಕಾಯಿಸಿ ಆರಿಸಿ ನೀರು ಕುಡಿಯಲು ಸೂಚಿಸಿದ್ದಾರೆ. ಯಾವುದೇ ತೊಂದರೆಯಾಗದಂತೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ವಾಟರ್ ರಿಪೋರ್ಟ್ ಒಂದು ಕಡೆಯಾದರೆ, ಈಗ ಜನರು ದೇವಿಯ ಶಾಪದಿಂದಲೇ ವಾಂತಿ ಭೇದಿ ಕಾಣಿಸಿಕೊಂಡಿದೆ ಎಂದು ಮಾತನಾಡಿಕೊಂಡು ದೇವಿಯ ಪೂಜೆ ಮಾಡಿ, ಕರೆಪ್ಪತಾತಾ ಮಠದಿಂದ ವಾದ್ಯ ಮೇಳಗಳೊಂದಿಗೆ ದೇವಿಯ ಮೂರ್ತಿ ಪೂಜಿಸಿ, ಪ್ರತಿಷ್ಠಾಪನೆ ಮಾಡಿ, ಮತ್ತೆ ಗ್ರಾಮಕ್ಕೆ ಯಾವುದೇ ಗಂಡಾಂತರ ಬಾರದಂತೆ ದೇವಿಯ ಮೊರೆ ಹೋಗಿದ್ದಾರೆ.
ಹೌದು, ಅನಪುರ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಎಸ್ಸಿ ಬಡಾವಣೆಯಲ್ಲಿ ಕರೆಮ್ಮಾ ದೇವಿಯ ಚಿಕ್ಕದಾದ ಮಂದಿರವಿತ್ತು. ಭಕ್ತರು ದೇವಿಯ ಪೂಜೆ ಪುನಷ್ಕಾರ ಮಾಡಿ ಹರಕೆ ತಿರಿಸಿ ತಮ್ಮ ಕಷ್ಟದಿಂದ ಪಾರಾಗುತ್ತಿದ್ದರು. ಮಂದಿರ ಹೇಗೆ ಇತ್ತು ಎಂದು ಈ ದೃಶ್ಯ ನೋಡಬಹುದಾಗಿದೆ. ಆದರೆ, ಈಗ ಮಂದಿರ ಕೆಡವಲಾಗಿದೆ. ಸ್ವಲ್ಪ ದೊಡ್ಡದಾಗಿ ದೇವಿಯ ಮಂದಿರ ನಿರ್ಮಾಣ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿ, ಕಳೆದ ಜನವರಿ 22 ರಂದು ಕರೆಮ್ಮ ದೇವಸ್ಥಾನ ಕೆಡವಿದ್ರು.