ಯಾದಗಿರಿ:ಜಿಲ್ಲೆಯ ಸುರಪುರ ಪಟ್ಟಣದ ದಂಪತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಜಿಲ್ಲಾಡಳಿತ ಲಾಕ್ ಡೌನ್ ಮತ್ತಷ್ಟು ಬಿಗಿಗೊಳಿಸಿ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದೆ.
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ತೆರೆಯಲಾದ ಬಟ್ಟೆ ಅಂಗಡಿಗಳು ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದವರು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವ ಜನರಿಗೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಶಹಪುರದಲ್ಲಿ ಎರಡು ಬಟ್ಟೆ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ತಲಾ 25 ಸಾವಿರ ರೂ.ದಂತೆ ದಂಡ ವಿಧಿಸುವ ಮೂಲಕ ಜಿಲ್ಲಾಡಳಿತದ ಆದೇಶ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದ್ದಾರೆ. ಅದಲ್ಲದೇ ನಗರದ ಬಿಗ್ ಬಜಾರ್, ಕಿರಣಾ ಅಂಗಡಿಗಳ ಮುಂದೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಗಾಳಿಗೆ ತೂರಿದ ಅಂಗಡಿ ಮಾಲೀಕರು ಸೇರಿದಂತೆ ಗ್ರಾಹಕರಿಗೂ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಇನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಜನರಿಗೂ ದಂಡ ವಿಧಿಸಿದ ಅಧಿಕಾರಿಗಳು ವೈರಸ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದಾರೆ.
ನಗರಸಭೆ ಪೌರಾಯುಕ್ತ ಬಸವರಾಜ್ ಶಿವಪೂಜೆಯವರ ನೇತೃತ್ವದಲ್ಲಿ ನಗರದಾದ್ಯಂತ ಲಾಕ್ ಡೌನ್ ಉಲ್ಲಂಘಿಸಿದ ಅಂಗಡಿ ಮಾಲಿಕರು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು 59 ಸಾವಿರಕ್ಕೂ ಅಧಿಕ ದಂಡ ಸಂಗ್ರಹಿದ್ದಾರೆ.