ಯಾದಗಿರಿ: ಅತಿವೃಷ್ಟಿ ಹಾಗೂ ಭೀಮಾ - ಕೃಷ್ಣಾ ನದಿ ಪ್ರವಾಹದಿಂದ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನೀರುಪಾಲಾಗುವ ಮೂಲಕ ಜಿಲ್ಲೆಯ ಅನ್ನದಾತರು ಸಂಕಷ್ಟಕ್ಕೀಡಾಗಿದ್ದರು. ಈ ಮಧ್ಯೆ, ಉತ್ತಮ ಇಳುವರಿ ಬಂದಿದ್ದ ಭತ್ತ ಬೆಳೆ ಕಟಾವು ಮಾಡಲು ರೈತರು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈತರ ಅನಿವಾರ್ಯತೆಯನ್ನೇ ಬಂಡವಾಳವನ್ನಾಗಿಸಿಕೊಂಡ ಖಾಸಗಿ ಭತ್ತ ಕಟಾವು ಯಂತ್ರ ಮಾಲೀಕರು ಹೆಚ್ಚಿನ ಹಣ ಬಾಡಿಗೆ ವಸೂಲಿಗೆ ಇಳಿದಿದ್ದರು. ಈ ಕುರಿತು ಈಟಿವಿ ಭಾರತ ಬಿತ್ತರಿಸಿದ ವರದಿಯಿಂದ ಎಚ್ಚೆತ್ತುಕೊಂಡ ಯಾದಗಿರಿ ಜಿಲ್ಲಾಡಳಿತ ಭತ್ತ ಕಟಾವು ಯಂತ್ರ ಮಾಲೀಕರು ಪಡೆಯುತ್ತಿದ್ದ ಹೆಚ್ಚಿನ ಬಾಡಿಗೆ ದರಕ್ಕೆ ಬ್ರೇಕ್ ಹಾಕುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ.
ಜಿಲ್ಲೆಯ ಶಹಪುರ, ಯಾದಗಿರಿ, ವಡಗೇರಾ ಹಾಗೂ ಹುಣಸಗಿ ಸೇರಿದಂತೆ ಹಲೆವೆಡೆ ಭತ್ತ ಬೆಳೆ ಕಟಾವಿಗೆ ಬಂದಿದ್ದು, ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಭತ್ತ ಕಟಾವು ಯಂತ್ರಗಳಿಗೆ ಭಾರಿ ಬೇಡಿಕೆ ಬಂದಿದೆ. ಹಾಗಾಗಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಹಾಗೂ ಖಾಸಗಿ ಎಜೆನ್ಸಿಗಳ ಸಹಯೋಗದಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರ ಸ್ಥಾಪನೆ ಮಾಡಿದೆ. ಪ್ರತಿ ಗಂಟೆಗೆ 1,300 ರೂ. ಬಾಡಿಗೆಯಿದ್ದು, ಕೇವಲ 6 ಭತ್ತದ ಕಟಾವು ಯಂತ್ರ ಮಾತ್ರ ಲಭ್ಯವಿದೆ. ಇದರಿಂದಾಗಿ ಜಿಲ್ಲೆಯ ಬಹುತೇಕ ರೈತರು ಖಾಸಗಿ ಯಂತ್ರಗಳ ಮೇಲೆ ಅವಲಂಬನೆಯಾಗುವಂತೆ ಮಾಡಿದೆ. ರೈತರ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ರೈತರಿಂದ ಹೆಚ್ಚಿನ ಹಣ ವಸೂಲಿಗೆ ಇಳಿದಿದ್ದರು.
ಖಾಸಗಿ ಭತ್ತ ಕಟಾವು ಯಂತ್ರ ಮಾಲೀಕರು ರೈತರು ಬೆಳೆದ ಭತ್ತದ ಬೆಳೆ ಕಟಾವು ಮಾಡಲು ಪ್ರತಿ ಗಂಟೆಗೆ 2,500 - 2700 ರೂ. ಬಾಡಿಗೆ ಪಡೆಯಲು ಮುಂದಾಗಿದ್ದು, ರೈತರಿಗೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ಕುರಿತು 'ಈಟಿವಿ ಭಾರತ'ನಲ್ಲಿ ವಿಸ್ತೃತ ವರದಿ ಬಿತ್ತರಿಸಲಾಗಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಖಾಸಗಿ ಭತ್ತ ಕಟಾವು ಯಂತ್ರದ ಮಾಲೀಕರ ವಸೂಲಿ ದಂಧೆಗೆ ಕಡಿವಾಣ ಹಾಕಲು ಮುಂದಾಗಿದೆ.