ಗುರುಮಠಕಲ್: ತಮ್ಮ ಜಮೀನು ಸಂಬಂಧ ಮೂಲ ನಕಲು ಪ್ರತಿ ಸಿಗದ ಹಿನ್ನೆಲೆ, ಹೈದರಾಬಾದ್ನಿಂದ ಬಂದ ದಂಪತಿ ಬಸ್ ನಿಲ್ದಾಣದಲ್ಲಿ ದಿನ ದೂಡುವಂತಾಗಿದೆ.
ಅತ್ತ ಊರಿಗೂ ತೆರಳಲಾಗದೇ, ಬಸ್ ನಿಲ್ದಾಣದಲ್ಲಿಯೇ ಇದ್ದು, 16 ದಿನಗಳಿಂದ ಬಸ್ ನಿಲ್ದಾಣ ಮತ್ತು ತಹಶೀಲ್ದಾರ್ ಕಚೇರಿಗೆ ಈ ಬಡ ದಂಪತಿ ಅಲೆದಾಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬೆಡಪಳ್ಳಿ ಗ್ರಾಮದ ಪ್ರಮಿಳಾ ಹಾಗೂ ವೆಂಕಟರೆಡ್ಡಿ ಪರದಾಟ ನಡೆಸುತ್ತಿರುವ ದಂಪತಿ ಆಗಿದ್ದಾರೆ.
ಇವರು ಹೈದರಾಬಾದ್ನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಪ್ರಮಿಳಾ ಪೋಷಕರಿಗೆ ಇಬ್ಬರು ಹೆಣ್ಣು ಮಕ್ಕಳು. ಈ ಹಿನ್ನೆಲೆ, ಪ್ರಮಿಳಾ ತವರೂರು ಗುರುಮಠಕಲ್ ತಾಲೂಕಿನ ಹಿಮಲಾಪುರ ಗ್ರಾಮದ ತನ್ನ ಪಿತ್ರಾರ್ಜಿತ ಆಸ್ತಿ ಪಡೆಯುವ ಸಲುವಾಗಿ ಜಮೀನಿನ ದಾಖಲೆ ಪಡೆಯಲು ಹೈದರಾಬಾದ್ನಿಂದ ಇದೇ 6ರಂದು ಗುರುಮಠಕಲ್ಗೆ ಆಗಮಿಸಿದ್ದರು.