ಯಾದಗಿರಿ: ಭೀಮಾ ನದಿ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ಥರನ್ನ ಯಾದಗಿರಿ ಜಿಲ್ಲಾಡಳಿತ ಕಾಳಜಿ ಕೇಂದ್ರಗಳಿಗೆ ಅವರನ್ನ ಸ್ಥಳಾಂತರ ಏನೋ ಮಾಡಿದೆ, ಆದ್ರೆ ಕಾಳಜಿ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ನೆರೆ ಸಂತ್ರಸ್ಥರು ಪರದಾಡುವಂತಾಗಿದೆ.
ಮಹರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಭೀಮಾ ನದಿಗೆ ಬಿಡಲಾದ ಭಾರಿ ಪ್ರಮಾಣದ ನೀರಿನಿಂದ ಜಿಲ್ಲೆಯ ನದಿ ಪಾತ್ರದ ಜಮೀನುಗಳಿಗೆ ಹಾಗೂ ಗ್ರಾಮಗಳಿಗೆ ನುಗ್ಗಿದ ನೀರಿನಿಂದ ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಅನೇಕರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಯಾದಗಿರಿ, ಶಹಪುರ ಸೇರಿದಂತೆ ವಡಗೇರಾ ತಾಲೂಕಿನ ನದಿ ತೀರದ 14 ಗ್ರಾಮಗಳ ಜನರನ್ನು ಜಿಲ್ಲಾಡಳಿತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದೆ. ಆದ್ರೆ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಮಾತ್ರ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡದ ಕಾರಣ ಕಾಳಜಿ ಕೇಂದ್ರದಲ್ಲಿರುವ ನಿತಾಶ್ರಿತರು ಜಿಲ್ಲಾಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭೀಮಾ ನದಿ ಪ್ರವಾಹಕ್ಕೆ ತುತ್ತಾದ ಜಿಲ್ಲೆಯ ಶಹಪುರ ತಾಲೂಕಿನ ಹುಸರಗುಂಡಗಿ ಗ್ರಾಮದ ಸುಮಾರು 250 ಕುಟುಂಬಗಳನ್ನ ಜಿಲ್ಲಾಡಳಿತ ಹೊಸ ಹುರಗುಂಡಗಿ ಗ್ರಾಮದ ಸಮುದಾಯ ಭವನ ಹಾಗೂ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದೆ. ಆದ್ರೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅಲ್ಲಿನ ಜನರಿಗೆ ಕನಿಷ್ಟ ಮೂಲ ಸೌಲಭ್ಯಗಳು ಸಿಗದ ಕಾರಣ ಅಲ್ಲಿನ ಸಂತ್ರಸ್ತರು ಪರದಾಡುವಂತಾಗಿದೆ.
ದಿನಬಳಕೆಗೆ ಬೇಕಾಗುವ ವಸ್ತೂಗಳು ಸ್ಟೋರ್ ರೂಂನಲ್ಲಿ ಸ್ಟಾಕ್ ಇದ್ದರು ಅಧಿಕಾರಿಗಳು ಅಲ್ಲಿನ ಸಂತ್ರಸ್ತರಿಗೆ ಅವುಗಳನ್ನ ನೀಡುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಿವೆ. ಶುದ್ಧ ಕುಡಿಯುವ ನೀರಿನ ಕ್ಯಾನ್ಗಳು ಕೂಡಾ ಸ್ಟಾಕ್ ಇದ್ದರೂ ಕೂಡ ಅಲ್ಲಿನ ಅಧಿಕಾರಿಗಳು ಕನಿಷ್ಟ ಕುಡಿಯು ನೀರನ್ನ ನೀಡದೇ ಅಮಾನವಿಯವಾಗಿ ವರ್ತಿಸುತ್ತಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹುರಸಗುಂಡಗಿ ಕಾಳಜಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಸೇರಿದಂತೆ ಅನೇಕ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. ಸರಿಯಾದ ಊಟ ಹಾಗೂ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ, ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸದ ಅಧಿಕಾರಿಗಳ ವಿರುದ್ದ ನೆರೆ ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ. ಪ್ರವಾಹ ಪರಿಸ್ಥತಿ ತಗ್ಗಿದ್ದರಿಂದ ಕೆಲ ಸಂತ್ರಸ್ತರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ತಮ್ಮ ಗ್ರಾಮದತ್ತ ತೆರಳುತ್ತಿದ್ದಾರೆ.