ಯಾದಗಿರಿ:ನಗರದ ಹಳೆ ಟೋಕ್ರಿ ಕೋಲಿ ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಸಮಾಜದ ಮುಖಂಡರು ಕಲ್ಲಂಗಡಿ ಕಟ್ ಮಾಡಿ, ಕಬ್ಬಿನ ಹಾಲು ಸೇವಿಸುವ ಮೂಲಕ ವಿಭಿನ್ನವಾಗಿ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ.
ಹೊಸ ವರ್ಷ ಹಿನ್ನೆಲೆಯಲ್ಲಿ ಕಾರ್ಯಾಲಯಕ್ಕೆ ಹಸಿರು ತೋರಣಗಳಿಂದ ಸಿಂಗರಿಸಿ, ಸುತ್ತಲೂ ಬಣ್ಣ ಬಣ್ಣದಿಂದ ವಿದ್ಯುತ್ ದೀಪಗಳನ್ನು ಅಳವಡಿಸಿ ವಿನೂತನ ಹಾಗೂ ವಿಭಿನ್ನವಾಗಿ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಭಾರತೀಯ ಆಹಾರ ಪದ್ಧತಿಯಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ. ಪಾಶ್ಚಾತ್ಯರ ಪದ್ಧತಿಗಳ ಅಂಧಾನುಕರಣೆಯನ್ನು ಕೈಬಿಟ್ಟು ಸ್ವಂತಿಕೆಯ ದೇಶಿ ಪದ್ಧತಿಗಳನ್ನು ಅನುಸರಿಸಬೇಕು. ಇದರಿಂದ ದೇಹದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಆಯೋಜಕರು ತಿಳಿಸಿದರು.
ಯುಗಾದಿಗೆ ನಮ್ಮದು ಹೊಸ ವರ್ಷ. ಅಂದು ನಮ್ಮ ದೇಶದ ಪದ್ಧತಿಯಂತೆ ಬೇವು ಬೆಲ್ಲ ಸೇವಿಸಿ ವರ್ಷಾಚರಣೆ ಮಾಡುವುದು ಸೌಹರ್ದತೆಯನ್ನು ಬೆಳೆಸುತ್ತದೆ. ರೈತರು ಬೆಳೆದ ಹಣ್ಣು-ಹಂಪಲನ್ನು ಸೇವಿಸಿ ಆಚರಣೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಇದರಿಂದ ರೈತರಿಗೆ ಬೆಂಬಲ ಕೊಟ್ಟಂತಾಗುತ್ತದೆ. ಕೊರೊನಾ ಮತ್ತು ಅತಿವೃಷ್ಟಿಯಿಂದ ಕಂಗಾಲಾಗಿರುವ ರೈತ ಕೂಡ ತಾನು ಬೆಳೆದ ಬೆಳೆಗೆ ಬೆಲೆ ಸಿಕ್ಕಂತಾಗುತ್ತದೆಂದು ಖುಷಿಪಡುತ್ತಾನೆ. ಇದು ಈ ಕಾರ್ಯಕ್ರಮ ಆಯೋಜನೆಯ ಉದ್ದೇಶವಾಗಿದೆ ಎಂದರು.