ಸುರಪುರ:ತಾಲೂಕಿನ ಕೆಂಭಾವಿ ಹೋಬಳಿಯಲ್ಲಿ ರಾಷ್ಟ್ರೀಯ ಕೃಷಿ ಕೂಲಿಕಾರರ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಸುವಂತೆ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ರೈತರಿಗೆ ಅನ್ಯಾಯವಾಗುವಂತಿರುವ ಎಪಿಎಂಸಿ(ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ರೈತರ ಸಾಲ ಮನ್ನಾ ಮಾಡಬೇಕು ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ ಸಂಘದ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಸರ್ಕಾರ ಭೂ ಖರೀದಿಗೆ ಸಂಬಂಧಿಸಿದಂತೆ ಜಾರಿಗೆ ತರುತ್ತಿರುವ ಕಾನೂನು ರೈತರನ್ನು ಸಾವಿನ ಕೂಪಕ್ಕೆ ತಳ್ಳಲಿದೆ. ಇದರಿಂದ ಬಂಡವಾಳಶಾಹಿಗಳು ದೊಡ್ಡ ಮೊತ್ತದಲ್ಲಿ ಭೂ ಖರೀದಿಗೆ ಮುಂದಾಗಲಿದ್ದು, ಬಡ ರೈತರಿಗೆ ಹಿಡಿ ಭೂಮಿಯೂ ಸಿಗದಂತೆ ಆಗಲಿದೆ. ಇದರಿಂದ ದೇಶದ ಕೃಷಿಯ ಮೇಲೂ ದೊಡ್ಡ ಪರಿಣಾಮ ಬೀರಲಿದೆ. ಆದ್ದರಿಂದ ಈ ಕಾನೂನನ್ನು ತರಬಾರದು ಎಂದು ಆಗ್ರಹಿಸಿದರು.
ಕಾರ್ಮಿಕರು ಈಗಾಗಲೇ ತುಂಬಾ ಸಂಕಷ್ಪದಲ್ಲಿದ್ದು, ಕೋವಿಡ್-19 ಕಾರಣದಿಂದ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಕಾರ್ಮಿಕರಿಗೆ ಆರು ತಿಂಗಳವರೆಗೆ ಪ್ರತಿ ತಿಂಗಳು ಆರು ಸಾವಿರ ಹಣ ನೀಡಬೇಕು ಮತ್ತು ಉಚಿತವಾಗಿ ರೇಷನ್ ಕೊಡಬೇಕು ಎಂದು ಒತ್ತಾಯಿಸಿದರು. ನಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಮೂಲಕ ಸಲ್ಲಿಸಿದರು.