ಯಾದಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರತೀ ವರ್ಷ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸರ್ವ ಧರ್ಮಗಳ ಜನರು ಸೇರಿ ಭಾವೈಕ್ಯತೆಯ ಸಂಕೇತವಾಗಿ ಮೊಹರಂ ಆಚರಣೆ ಮಾಡಲಾಗುತ್ತೆ. ಆದ್ರೆ ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಣೆಗೆ ಅನುಮತಿ ನೀಡಲಾಗಿದೆ. ಆದ್ರೆ ಸಂಭ್ರಮದ ನಡುವೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಲಾಗಿದೆ.
ಜಿಲ್ಲೆಯ ಗುರುಮಠಕಲ್ ತಾಲೂಕಿನ ಹೊಸಹಳ್ಳಿ (ಎಸ್) ತಾಂಡದಲ್ಲಿ ನಿನ್ನೆ ತಮಟೆ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೊಸಹಳ್ಳಿ ತಾಂಡದ ನಿವಾಸಿ ಬಾಲಪ್ಪ (45) ಕೊಲೆಯಾದ ವ್ಯಕ್ತಿ. ಇದೇ ತಾಂಡದ ಶಂಕರ್ ಎಂಬಾತನ ಮನೆಯಲ್ಲಿ ನಿಶ್ಚತಾರ್ಥ ಕಾರ್ಯಕ್ರಮ ಇದ್ದ ಹಿನ್ನೆಲೆ ಬಾಲಪ್ಪ ತನ್ನ ತಮಟೆಯನ್ನ ಕೊಟ್ಟಿದ್ದರು. ಆದ್ರೆ ಶಂಕರ್ ಮಾತ್ರ ಕೆಲಸ ಮುಗಿದ ಮೇಲೆ ತಮಟೆ ವಾಪಸ್ ಕೊಡದೆ ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಆದ್ರೆ ನಿನ್ನೆ ಮೊಹರಂ ಕೊನೆ ದಿನದ ಹಿನ್ನೆಲೆ ಶಂಕರ್ ಹಾಗೂ ಕುಟುಂಬಸ್ಥರು ತಮಟೆಯನ್ನ ಹೊರ ತೆಗೆದು ಬಾರಿಸುತ್ತ ಹೆಜ್ಜೆ ಹಾಕುತ್ತಾ ಸಂಭ್ರಮಿಸುತ್ತಿದ್ರು. ಇದು ತಮಟೆ ಮಾಲೀಕ ಬಾಲಪ್ಪನ ಕಣ್ಣಿಗೆ ಬಿದ್ದಿದ್ದು, ತಮಟೆಯನ್ನು ವಾಪಸ್ ಕೊಡಿ ಅಂತಾ ಕೇಳಲು ಹೋಗಿದ್ದಾರೆ. ಆದ್ರೆ ಶಂಕರ್ ಮಾತ್ರ ಈ ತಮಟೆ ನಮ್ಮದು, ನಾವಿದನ್ನು ಕೊಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ಜಗಳ ಆರಂಭವಾಗಿದೆ.