ಗುರುಮಠಕಲ್: ತಾಲೂಕು ಕೇಂದ್ರ ಎಂದು ಗುರುಮಠಕಲ್ ಘೋಷಣೆಯಾದ ನಂತರ ಪಟ್ಟಣದ ಮುಖ್ಯ ರಸ್ತೆಗಳು ಸದಾ ಜನ ಜಂಗುಳಿಯಿಂದ ತುಂಬಿರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುಗಮ ವಾಹನ ಸಂಚಾರಕ್ಕಾಗಿ ಪುರಸಭೆ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಸ್ತೆ ಬದಿಯ ಬೀದಿ ವ್ಯಾಪಾರಿಗಳನ್ನು ಪಟ್ಟಣದ ಇಂದಿರಾಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಮಾತ್ರವೇ ವ್ಯಾಪಾರ ಮಾಡುವಂತೆ ಮನವೊಲಿಸಿ ಸ್ಥಳಾಂತರಿಸಲಾಯಿತು.
ಪುರಸಭೆ ಸೂಚಿಸಿದ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು: ಶರಣಪ್ಪ ಮಡಿವಾಳ
ಬೀದಿ ಬದಿಯ ವ್ಯಾಪಾರಿಗಳು ಕಡ್ಡಾಯವಾಗಿ ಪುರಸಭೆ ಸೂಚಿಸಿದ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಮುಖ್ಯರಸ್ತೆಯ ಮೇಲೇಯೇ ತಳ್ಳುಗಾಡಿಗಳ ಮೂಲಕ ತರಕಾರಿ ಮಾರಾಟ ಮಾಡುತ್ತಿದ್ದರಿಂದ ವಾಹನ ಸಂಚಾರಕ್ಕೆ ತುಂಬ ತೊಂದರೆಯ ಉಂಟಾಗಿತ್ತು. ಮುಖ್ಯರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಬೀದಿ ಬದಿಯ ವ್ಯಾಪಾರಿಗಳು ಕಡ್ಡಾಯವಾಗಿ ಪುರಸಭೆ ಸೂಚಿಸಿದ ಜಾಗದಲ್ಲಿಯೇ ವ್ಯಾಪಾರ ಮಾಡಬೇಕು. ಮತ್ತು ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಸೂಕ್ತ ಜಾಗ ಸೂಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಪಿಎಸ್ಐ ಹನಮಂತ ಬಂಕಲಗಿ, ಪೊಲೀಸ್ ಅಧಿಕಾರಿಗಳು ಹಾಗೂ ಪುರಸಭೆ ಸಿಬ್ಬಂದಿ ಇದ್ದರು.