ಗುರುಮಠಕಲ್:ಪಟ್ಟಣದ ಪುರಸಭೆ ಹಾಗೂ ತಹಶೀಲ್ದಾರ್ ಕಚೇರಿಗೆ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕೋವಿಡ್-19 ಕುರಿತು ಜನರಲ್ಲಿ ಆತಂಕ ಬೇಡ: ಡಾ.ಉಮೇಶ್ ಜಾಧವ್ ಪೂರ್ವ ಸೂಚನೆ ಇಲ್ಲದೆ ಸಂಸದರು ದಿಢೀರ್ ಭೇಟಿ ನೀಡಿದ್ದರಿಂದ, ಯಾಗಿದರಿಯ ಬಿಜೆಪಿ ಕಾರ್ಯಕರ್ತರಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಬಂಜಾರಾ ಸಮಾಜದ ಮುಖಂಡ ಅಮರೇಶ್ ರಾಠೋಡ ಪುತ್ರ ಶಶಿಧರ ರಾಠೋಡ ಬೈಕ್ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದ ಸಂಸದ ಡಾ. ಉಮೇಶ್ ಜಾಧವ್ ಚಿತ್ತಾಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಗುರುಮಠಕಲ್ ಪುರಸಭೆ ಹಾಗೂ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡ ಸಂಸದರು, ಪಟ್ಟಣದ ನೀರಿನ ಸಮಸ್ಯೆ, ಮಳೆಯಿಂದಾದ ಹಾನಿ, ಉದ್ಯೋಗ ಖಾತ್ರಿ ಕೆಲಸ ಹಾಗೂ ಹಣ ಬಿಡುಗಡೆಯಾದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು. ಮಳೆಯಿಂದಾಗಿ ತಾಲ್ಲೂಕಿನಲ್ಲಿ ಯಾವುದೇ ರೀತಿ ಅಹಿತಕರ ಘಟನೆ ವರದಿಯಾಗಿಲ್ಲ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಕೋವಿಡ್-19 ಕುರಿತು ಜನರಲ್ಲಿ ಆತಂಕ ಬೇಡ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್-19ರ ಕಾರ್ಯದಲ್ಲಿ ಯಾರಾದರೂ ಬೇಜವಾಬ್ದಾರಿಯಿಂದ ವರ್ತಿಸಿದರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಪಡಿತರ ಕಾರ್ಡ್ ಇಲ್ಲದಿರುವವರಿಗೆ ಆಧಾರ್ ಕಾರ್ಡ್ ಮೂಲಕ ತಹಶೀಲ್ದಾರ್ ರುಜು ಪಡೆದು ಆಹಾರ ಧಾನ್ಯ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಜಿಡಗೆಯವರಿಗೆ ಸೂಚನೆ ನೀಡಿದರು. ಸಂಸದರು ಚಿತ್ತಾಪುರದಿಂದ ಯಾದಗಿರಿ ಮೂಲಕ ಗುರುಮಠಕಲ್ ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಬೆಳವಣಿಗೆಗಳನ್ನು ಪರಿಶೀಲಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಎಡಿ ಶರಣು ಮೈಲಾರಿ, ತಹಶೀಲ್ದಾರ್ ಸಂಗಮೇಶ್ ಜಿಡಗೆ, ಪುರಸಭೆ ಮುಖ್ಯಾಧಿಕಾರಿ ಜೀವನ್ ಕುಮಾರ ಕಟ್ಟಿಮನಿ, ಆನಂದ ಹಾಗೂ ಗುರುಮಠಕಲ್ ವೈದ್ಯಾಧಿಕಾರಿ ಶಿವಪ್ರಸಾದ ಮೈತ್ರಿ ಉಪಸ್ಥಿತರಿದ್ದರು.