ಗುರುಮಠಕಲ್(ಯಾದಗಿರಿ):ಕೊರೊನಾ ಸುನಾಮಿಯನ್ನು ತಡೆಯಲು ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವಂತೆ ಜನರಿಗೆ ಅರಿವು ಮೂಡಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯನ್ನು ಪರಿಶೀಲಿಸಿ ವೈದ್ಯಾಧಿಕಾರಿಗಳೊಂದಿಗೆ ವಿಚಾರಿಸುತ್ತಾ, ರಾಜ್ಯ ಸರ್ಕಾರ ಕೊರೊನಾ ಲಸಿಕೆಯನ್ನು ಉಚಿತವಾಗಿ ವಿತರಿಸುತ್ತಿದೆ.
ಆಸ್ಪತ್ರೆಯಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲಾಗಿದೆ. ಯಾರಿಗೂ ಕೊರತೆಯಾಗಿರಬಾರದು, ತ್ವರಿತವಾಗಿ ಲಸಿಕೆ ಪ್ರಮಾಣ ಹೆಚ್ಚಿಸಬೇಕು ಎಂದು ತಿಳಿಸಿದರು. ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುವುದು, ಆಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗುವುದು.
25 ರಿಂದ 50 ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಬಿಇಎಲ್ ಕಂಪನಿ ಅಡಿಯಲ್ಲಿ ಆಮ್ಲಜನಕ ಘಟಕ ಆರಂಭಿಸಲಾಗುವುದು ಎಂದು ವಿವರಿಸಿದರು.
ಲಸಿಕೆಯ ಮೊದಲನೇ ಹಂತದಲ್ಲಿ 65ಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕಿರುವುದರಿಂದ ಅವರಲ್ಲಿ ಸಾವಿನ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಆತ್ಮವಿಶ್ವಾಸ, ಉತ್ತಮ ಆಹಾರ, ಉಸಿರಾಟದ ವ್ಯಾಯಮ, ಧನಾತ್ಮಕ ಯೋಚನೆಗಳು ಮತ್ತು ಲಸಿಕೆಯಿಂದ ಕೊರೊನಾ ಸೋಂಕು ತಡೆಗಟ್ಟಬಹುದು ಎಂದರು.
ಬಂದೆಳ್ಳಿ ಗ್ರಾಮದ ಶಾಲೆಯಲ್ಲಿ ಕೊರೊನಾ ರೋಗಿಗಳನ್ನು ಉತ್ತಮವಾದ ಚಿಕಿತ್ಸೆ ಕಲ್ಪಿಸಲು ಎಲ್ಲ ರೀತಿಯಿಂದ ವ್ಯವಸ್ಥೆ ಮಾಡಲಾಗಿದೆ. ಬೆಡ್ ವ್ಯವಸ್ಥೆ ಹಾಗೂ ಆಮ್ಲಜನಕ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಉಮೇಶ ಜಾಧವ್ ರಾಜ್ಯದಲ್ಲಿಯೇ ಅತಿ ಹೆಚ್ಚು ಗುಳೆ ಹೋಗುವ ಕ್ಷೇತ್ರ ಗುರುಮಠಕಲ್ ಆಗಿದೆ. ಇಲ್ಲಿ ಬಡತನ, ಅನಕ್ಷರತೆ ಹೆಚ್ಚಿದ್ದು, ಕಡಿಮೆ ಜಾಗೃತಿ ಹೊಂದಿರುವ ಜನರಿದ್ದಾರೆ.
ಗುಳೆ ಹೋಗಿ ಬಂದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಅವರಿಗೆ ಉದ್ಯೋಗ ನೀಡಬೇಕು. ಅಧಿಕಾರಿಗಳು ಜಾಬ್ ಕಾರ್ಡು ಇಲ್ಲದವರಿಗೆ ಜಾಬ್ ಕಾರ್ಡು ಮಾಡಿಸಿ ಉದ್ಯೋಗ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಡಿಹೆಚ್‌ಒ ಡಾ.ಇಂದುಮತಿ, ವೈದ್ಯಾಧಿಕಾರಿ ಪ್ರಿಯಾಂಕ ಹೊಸಮನಿ, ಡಾ.ಸಂಗಮ್ಮ, ಸಿಪಿಐ ದೇವಿಂದ್ರಪ್ಪ, ಪಿಎಸ್‌ಐ ಹಣಮಂತು ಸೇರಿದಂತೆ ಇತರರು ಇದ್ದರು.