ಹಳಸಿದ ಆಹಾರ ಸೇವಿಸಿ 10ಕ್ಕೂ ಹೆಚ್ಚು ಜಾನುವಾರು ಸಾವು ಯಾದಗಿರಿ:ಹಳಸಿದ ಆಹಾರ ಸೇವಿಸಿ ಹತ್ತಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಯರಗೋಳ ಗ್ರಾಮದಲ್ಲಿ ನಡೆದಿದೆ. ಇನ್ನು 200ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿವೆ. ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಿದ್ದಾರೆ.
ಹಳಸಿದ ಆಹಾರ ಸೇವನೆಯಿಂದ 200ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿದ್ದು, ಅವುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಸದ್ಯ ಯಾವುದೇ ತೊಂದರೆ ಇಲ್ಲ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಉಳಿದಿದ್ದ ಹಳಸಿದ ಅನ್ನ ತಿಂದಿದ್ದರಿಂದ ಜಾನುವಾರುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೆಡಿಎಸ್ ಪಕ್ಷದವರೇ ಹೊಣೆ ಹೊರಬೇಕಾಗುತ್ತದೆ ಎಂದ ಬಿಜೆಪಿ ಮುಖಂಡ:ಈ ಬಗ್ಗೆ ಬಿಜೆಪಿ ಮುಖಂಡ ಗಿರೀಶ್ ಮಟ್ಟಣ್ಣನವರ್ ಮಾತನಾಡಿ, "ಗುರುಮಠಕಲ್ನ ಯರಗೋಳ ಗ್ರಾಮದಲ್ಲಿ 10 ಹಸುಗಳು ಮೃತಪಟ್ಟಿವೆ, ಸುಮಾರು 200 ರಿಂದ 250 ಹಸುಗಳ ಪರಿಸ್ಥಿತಿ ಗಂಭೀರವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದಕ್ಕೆ ಕಾರಣ ಮಾ.23 ರಂದು ಜೆಡಿಎಸ್ ಹಮ್ಮಿಕೊಂಡಿದ್ದ ಪಂಚರತ್ನ ಯಾತ್ರೆ, 5 ಕ್ವಿಂಟಲ್ ನಷ್ಟು ಊಟವನ್ನು ಅಲ್ಲಿಯೇ ಚೆಲ್ಲಿ ಹೋಗಿದ್ದಾರೆ, ಹೀಗಾಗಿ ಅ ಊಟವನ್ನು ತಿಂದು ಈ ರೀತಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಹಶೀಲ್ದಾರ್, ಪೊಲೀಸರು, ಪಶುಸಂಗೋಪನಾ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳಬೇಕು ಎಂದು ಒತ್ತಾಯಿಸುತ್ತೇನೆ" ಎಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಜೊತೆಗೆ ಈ ಪ್ರಕರಣವನ್ನು ನಿರ್ಲಕ್ಷ್ಯ ಅಥವಾ ತಡ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ. ಒಂದು ವೇಳೆ ಹಸುಗಳು ಹಳಸಿದ ಆಹಾರ ಸೇವಿಸಿ ಸಾವನ್ನಪ್ಪಿರುವುದು ದೃಢಪಟ್ಟರೆ ಅದಕ್ಕೆ ಜೆಡಿಎಸ್ ಪಕ್ಷದವರೇ ಹೊಣೆ ಹೊರಬೇಕಾಗುತ್ತದೆ. ಇದಕ್ಕೆ ಜೆಡಿಎಸ್ ಮುಖಂಡರು ಪರಿಹಾರ ನೀಡಬೇಕು ಮತ್ತು ತಕ್ಷಣ ಅವರ ಮೇಲೆ ಕ್ರಮ ಆಗಬೇಕು, ಆ ಮೂಲಕ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಬಿಜೆಪಿ ಮುಖಂಡ ಮಟ್ಟಣ್ಣನವರ್ ಒತ್ತಾಯಿಸಿದರು. ಜೀವನಕ್ಕೆ ಆಧಾರವಾಗಿದ್ದ ಜಾನುವಾರುಗಳ ಸಾವಿನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ:ಯಾದಗಿರಿ ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ