ಯಾದಗಿರಿ: ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳ ಬೆಳವಣಿಗೆಯಾಗಲಿ ಎನ್ನುವ ದೃಷ್ಟಿಯಿಂದ ಹೊಸ ಕೈಗಾರಿಕಾ ನೀತಿ ಕಾಯ್ದೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲೆಯ ಕಡೈಚೂರ್ ಕೈಗಾರಿಕಾ ಪ್ರದೇಶದ ಪರಿವಿಕ್ಷಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಉದ್ಯಮ ಸ್ನೇಹಿಯಾಗಿ ಹೊಸ ಕೈಗಾರಿಕಾ ನೀತಿ ಈಗಾಗಲೇ ಪ್ರಕಟಿಸಿದ್ದು, ಅದರಲ್ಲಿ ಬೆಂಗಳೂರು ಕೇಂದ್ರೀಕೃತ ಹೊರತುಪಡಿಸಿ ಇತರೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಮತ್ತು ಹೂಡಿಕೆಗೆ ವಿಶೇಷ ಒತ್ತು ನೀಡಲಾಗಿದೆ ಎಂದರು.
ಎಸ್.ಐ.ಆರ್ (ಸ್ಪೆಷಲ್ ಇನ್ವೆಸ್ಟ್ಮೆಂಟ್ ರೀಜನಲ್) ಪಾಲಿಸಿಯಲ್ಲಿ ಧಾರವಾಡ, ಕಲಬುರಗಿ, ಶಿವಮೊಗ್ಗ ಕೈಗಾರಿಕಾ ಸೆಂಟರ್ಗಳಾಗಿ ಕೈಗಾರಿಕೋದ್ಯಮ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಉದ್ಯಮ ಸ್ಥಾಪನೆಗೆ ಉದ್ದಿಮೆದಾರರು ಪಡುವ ಸಂಕಷ್ಟಗಳನ್ನು ತಪ್ಪಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೊಳಿಸಿದ್ದು, 15 ಕೋಟಿ ರೂ.ವರೆಗಿನ ಯೋಜನೆಗಳ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.
15 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ತಾವು ಒಳಗೊಂಡಂತೆ ಮುಖ್ಯಮಂತ್ರಿಗಳ ನೇತೃತ್ವದ ಸಮಿತಿ ಒಪ್ಪಿಗೆ ನೀಡುತ್ತದೆ. ಇದಲ್ಲದೆ ಇತ್ತೀಚೆಗೆ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು 79(ಎ), 79(ಬಿ) ಕಲಂಗಳನ್ನು ತೆಗೆದು ಹಾಕಲಾಗಿದ್ದು, ಇದರಿಂದ ಉದ್ಯಮಿಗಳು ನೇರವಾಗಿ ರೈತರಿಂದ 100 ಎಕರೆವರೆಗೆ ಜಮೀನು ಖರೀದಿಸಬಹುದಾಗಿದೆ. ಕಾಯ್ದೆ ತಿದ್ದುಪಡಿಯಿಂದ ಅನ್ನದಾತನಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಹಾಗೂ ಕೈಗಾರಿಕೆ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಕಡೈಚೂರ್ನಲ್ಲಿ 15 ಕಂಪನಿಗಳು ಪ್ರಾರಂಭವಾಗಿಲಿವೆ. ಕಡೈಚೂರ್ ಸೇರಿದಂತೆ ದೇಶದಾದ್ಯಂತ 4-5 ಕಡೆ ಕೇಂದ್ರ ಸರ್ಕಾರ “ಫಾರ್ಮಾ ಪಾರ್ಕ್” ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಯಾದಗಿರಿ ಜಿಲ್ಲೆಯ ಕಡೈಚೂರ್ನಲ್ಲಿ ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್ ಸ್ಥಾಪನೆಗೆ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಅವರಿಗೆ ಮನವಿ ಮಾಡಲಾಗಿದೆ ಎಂದರು.