ಯಾದಗಿರಿ: ಯಾದಗಿರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಕಿಡಿಕಾರಿದ್ದಾರೆ.
ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಬೇಡ ಎಂಬ ಹೇಳಿಕೆ ನೀಡಿದ್ದರು ಎನ್ನಲಾಗ್ತಿದೆ. ಇದರಿಂದ ಸಿಡಿಮಿಡಿಗೊಂಡಿರುವ ಶಾಸಕರು, ನಗರದ ಎನ್ವಿಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಸಿಎಂ ಕುಮಾರಸ್ವಾಮಿ ತಮ್ಮ ಹೇಳಿಕೆಗೆ ಸಮರ್ಥನೆ ನೀಡಬೇಕು. ಯಾದಗಿರಿ ಜಿಲ್ಲೆಯ ವಿದ್ಯಾರ್ಥಿಗಳು ಮೆಡಿಕಲ್ ಓದಬಾರದೇ? ನಾವೇನು ಅನಕ್ಷರಸ್ಥರೇ? ಎಂದು ಮುದ್ನಾಳ್ ಪ್ರಶ್ನಿಸಿದ್ದಾರೆ.
ಸಿಎಂ ವಿರುದ್ಧ ಶಾಸಕ ಮುದ್ನಾಳ್ ವಾಗ್ದಾಳಿ ಈಗಾಗಲೇ 30 ಎಕರೆ ಜಾಗವನ್ನು ಮೀಸಲಿಟ್ಟು, 600 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜಿನ ಸ್ಥಾಪನೆಗೆ ಜಿಲ್ಲಾಡಳಿತ ತುದಿಗಾಲದಲ್ಲಿ ನಿಂತಿದೆ. ಆದರೆ ಸಿಎಂ ಇದನ್ನು ಬೇಡ ಅಂತ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಮನಸ್ಸಿಗೆ ತಿಳಿದಂತೆ ನಿರ್ಧಾರ ತೆಗೆದುಕೊಳ್ಳುವ ಇಂತಹ ಮುಖ್ಯಮಂತ್ರಿಯನ್ನು ಈವರೆಗೂ ನೋಡೇ ಇಲ್ಲವೆಂದು ಶಾಸಕ ಮುದ್ನಾಳ್ ಹರಿಹಾಯ್ದರು.
ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದರಿಂದ ಸ್ಥಳೀಯ ವಿದ್ಯಾರ್ಥಿಗಳೂ ಸಹ ವೈದ್ಯಕೀಯ ಕೋರ್ಸ್ ಕಲಿಯಲು ಅವಕಾಶ ಸಿಗುತ್ತದೆ. ರೋಗಿಗಳು ಚಿಕಿತ್ಸೆಗೆಂದು ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಹೋಗುವುದು ತಪ್ಪುತ್ತದೆ ಎಂದು ಶಾಸಕ ವೆಂಕಟರೆಡ್ಡಿ ಹೇಳಿದರು.