ಯಾದಗಿರಿ : ರಾಜ್ಯದಲ್ಲಿ ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುವ ಮುಖಾಂತರ ಮೈತ್ರಿ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.
ನಂಬರ್ ನಮ್ಮತ್ರ ಇದೆ.. ಅಧಿಕಾರವೂ ನಮ್ದೆ.. ಕಾಂಗ್ರೆಸ್ ನಾಯಕನ ವಿಶ್ವಾಸ - Yadagiri
ಬಿಜೆಪಿ ನಾಯಕರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ರಚನೆ ಮಾಡುವ ಕನಸನ್ನು ಕಾಣಬಾರದು ಎಂದು ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಬಿಜೆಪಿ ನಾಯಕರ ಕಾಲೆಳೆದರು.
ನಗರದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ತೀರ್ಪು ನೀಡಿ ಆಡಳಿತ ನಡೆಸಲು ಸಮಿಶ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ಆದರೆ, ಬಿಜೆಪಿ ನಾಯಕರು ಪ್ರತಿಪಕ್ಷದಲ್ಲಿ ಕುಳಿತಕೊಂಡು ಜನರ ಪರವಾಗಿ ಕೆಲಸ ಮಾಡದೇ ಆಪರೇಷನ್ ಕಮಲಕ್ಕೆ ಕೈ ಹಾಕಿ ದೋಸ್ತಿ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಶಾಸಕರಿಗೆ ಹಣ, ಅಧಿಕಾರ, ಮಂತ್ರಿಗಿರಿಯ ಆಮಿಷ ತೋರಿಸುವ ಮೈತ್ರಿಯನ್ನು ಕೆಡವಲು ಮುಂದಾಗಿದ್ದಾರೆ. ಆದರೆ, ಅದು ಯಾವ ಕಾಲಕ್ಕೂ ಆಗದು. ಬಿಜೆಪಿ ನಾಯಕರು ಆಪರೇಷನ್ ಕಮಲ ಕೈಬಿಬೇಕು ಎಂದರು.
ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ಮೊದಲಿನಿಂದಲೂ ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದಾರೆ ಹೊರೆತು ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಅಂತಾ ಎಲ್ಲೂ ಹೇಳಿಲ್ಲ. ಅವರು ರಾಜೀನಾಮೆ ನೀಡಿರುವುದು ಅವರ ವೈಯಕ್ತಿಕ ವಿಚಾರ. ಅವರು ಬಿಜೆಪಿ ಪಕ್ಷಕ್ಕೆ ಸೇರುತ್ತಾರೆ ಎನ್ನುವುದು ವದಂತಿ ಎಂದರು.ದೋಸ್ತಿ ಸರ್ಕಾರ ಪತನವಾಗಬೇಕಾದರೆ 15 ಶಾಸಕರು ರಾಜೀನಾಮೆ ನೀಡಬೇಕು. ಆದರೆ, ನಮ್ಮಲ್ಲಿ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಂಬರ್ ನಮ್ಮ ಹತ್ರ ಇದೆ. ಅಧಿಕಾರ ನಮ್ಮ ಹತ್ರ ಇದೆ. ಹೀಗಾಗಿ ಬಿಜೆಪಿ ನಾಯಕರು ಮಾಡುತ್ತಿರುವ ಶ್ರಮ ವ್ಯರ್ಥ ಪ್ರಯತ್ನ ಎಂದರು.