ಯಾದಗಿರಿ:ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಹುಟ್ಟುಹಬ್ಬದ ನಿಮಿತ್ತ ಬ್ಯಾನರ್ ಹಾಗೂ ಪೋಸ್ಟರ್ ಅಂಟಿಸಲು ತೆರಳುತ್ತಿದ್ದ ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ. ಅಲ್ಲದೆ, ರಾಜುಗೌಡ ಅವರ ಭಾವಚಿತ್ರವುಳ್ಳ ಬ್ಯಾನರ್ಗಳನ್ನು ಹರಿದು, ವಾಹನವನ್ನು ಜಖಂಗೊಳಿಸಿದಂತಹ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ.
ಕಳೆದ ರಾತ್ರಿ ಶಾಸಕರಿಗೆ ಶುಭ ಕೋರಿದ ಪೋಸ್ಟರ್ ಮತ್ತು ಬ್ಯಾನರ್ ಗಳನ್ನ ನಗರದ ಹಲವೆಡೆ ಅಂಟಿಸಲು ಗಾಂಧಿ ವೃತ್ತದ ಬಳಿ ತೆರಳುತ್ತಿದ್ದಂತ ವಾಹನದ ಮೇಲೆ ಕಲ್ಲು ತೂರಾಡಲಾಗಿದೆ. ಈ ಕೃತ್ಯವನ್ನು ಕೆಲ ಕಾಂಗ್ರೆಸ್ ಕಾರ್ಯಕರ್ತರೇ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಏಕಾಏಕಿ ಕಲ್ಲು ತೂರಾಡಿದ್ದರಿಂದ ವಾಹನದ ಗ್ಲಾಸ್ ಪುಡಿಪುಡಿಯಾಗಿದ್ದು, ಪೋಸ್ಟರ್ ಮತ್ತು ಬ್ಯಾನರ್ಗಳು ಚೆಲ್ಲಾಪಿಲ್ಲಿಯಾಗಿವೆ.
ಶಾಸಕ ರಾಜುಗೌಡ ಹುಟ್ಟುಹಬ್ಬದ ಬ್ಯಾನರ್ ಹರಿದು, ವಾಹನದ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ.. ಹಲ್ಲೆಗೆ ಪ್ರತೀಕಾರ:ಕಳೆದ ತಿಂಗಳಷ್ಟೇ ಕ್ಷೇತ್ರದ ಕೊಡೆಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಅಂಟಿಸಲು ತೆರಳುತ್ತಿದ್ದಂತಹ ಸಂದರ್ಭದಲ್ಲಿ ಕಾಂಗ್ರೆಸ್ ನ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು ಎನ್ನಲಾಗ್ತಿದೆ. ಈ ಹಲ್ಲೆಗೆ ಪ್ರತೀಕಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಈ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹಾಲಿ ಶಾಸಕ ರಾಜುಗೌಡ ಮತ್ತು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ದ್ವೇಷ ಮುಂದುವರೆದಿದ್ದು, ಇವರ ಕಿತ್ತಾಟಕ್ಕೆ ಕೈ ಮತ್ತು ಕಮಲದ ಕಾರ್ಯಕರ್ತರ ಮಧ್ಯ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಬ್ಯಾನರ್ ಮತ್ತು ಪೋಸ್ಟರ್ ವಿಚಾರಕ್ಕೆ ಈ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ನಗರದಾದ್ಯಂತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.