ಗುರುಮಠಕಲ್ (ಯಾದಗಿರಿ):ಆಶ್ರಯ ಯೋಜನೆಯಡಿ ಸುಮಾರು 131 ಫಲಾನುಭವಿಗಳಿಗೆ ಇಂದು ಶಾಸಕ ನಾಗನಗೌಡ ಕಂದಕೂರ ಮತ್ತು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿದರು. ಗುರುಮಠಕಲ್ ಪುರಸಭೆ ವ್ಯಾಪ್ತಿಯ ಆಶ್ರಯ ಯೋಜನೆ ಅಡಿ ಸರ್ವೆ ನಂ.19/1 ರಲ್ಲಿ 33 ಜನ, ಸರ್ವೆ.ನಂ 20ರಲ್ಲಿ 30 ಜನ, 25ರಲ್ಲಿ 131 ಜನರನ್ನು ಆಯ್ಕೆಮಾಡಿ ಈ ಹಿಂದೆ ನಿವೇಶನಗಳ ಹಕ್ಕುಪತ್ರಗಳನ್ನು ನೀಡಲಾಗಿತ್ತು.
ಆದರೆ ಹಕ್ಕು ಪತ್ತ ನೀಡಿದ್ದರೂ ನಿವೇಶನಗಳನ್ನು ಹಂಚಿಕೆ ಮಾಡದೇ ನನೆಗುದಿಗೆ ಬಿದ್ದ 30 ವರ್ಷಗಳು ಕಳೆದಿದ್ದವು. ಇದೀಗಾ ನನೆಗುದಿಗೆ ಬಿದ್ದ ಸಮಸ್ಯೆಯನ್ನು ಶಾಸಕ ನಾಗನಗೌಡ ಕಂದಕೂರ ಮತ್ತು ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರ ಸಮಕ್ಷಮದಲ್ಲಿ ಇಂದು ಪರಿಹರಿಸಲಾಯಿತು. 2017-18ನೇ ಸಾಲಿನ ರಾಜೀವಗಾಂಧಿ ವಸತಿ ನಿಗಮದ ಆಶ್ರಯಯೋಜನೆ ಅಡಿಯಲ್ಲಿ ಮಂಜೂರಾದ ಸರ್ವೆನಂ 25ರಲ್ಲಿ ಹಂಚಿಕೆಯಾದ 131 ನಿವೇಶನಗಳ ಸ್ಥಳವನ್ನು ಶಾಸಕರು ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲಿಸಿ ನಂತರ ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಹಕ್ಕುಪ್ರತ ನೀಡಿದರು.
ಬಳಿಕ ಮಾತನಾಡಿದ ಶಾಸಕ, ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದ್ದ ಸಮಸ್ಯೆ ಬಗೆಹರಿಸುವ ಮೂಲಕ ಬಡವರ ಕನಸನ್ನು ನನಸಾಗಿ ಮಾಡಲು ಶ್ರಮಿಸಿದ್ದೇನೆ. ಸಮಸ್ಯೆಯ ಗಂಭೀರತೆಯ ಬಗ್ಗೆ ಅಧಿಕಾರಿಗಳು ತಿಳಿಸಿದಾಗ ಬಡವರಿಗೆ ನ್ಯಾಯ ಒದಗಿಸಲು ಸಂಪೂರ್ಣ ಸಹಕಾರ ನೀಡಿದ್ದೇನೆ. ಅದಕ್ಕೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಮತ್ತು ಅವರ ತಂಡದ ಶ್ರಮವನ್ನು ಮರೆಯುವಂತಿಲ್ಲ. ಅಲ್ಲದೇ ಈಟಿವಿ ಭಾರತ ನ್ಯೂಸ್ನಲ್ಲಿ ಬಂದ ವರದಿಯು ಅತ್ಯಂತ ಮಹತ್ವದಾಗಿದೆ ಎಂದು ಇದೇ ವೇಳೆ ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.