ಯಾದಗಿರಿ:ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಶಕ್ತಿ ಯೋಜನೆಗೆ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಮಹಿಳಾ ಸಶಕ್ತೀಕರಣ ಮತ್ತು ಸಬಲೀಕರಣಕ್ಕೆ ನೆರವಾಗಿದೆ ಎಂದರು.
ಇಂದಿನಿಂದ ರಾಜ್ಯದಲ್ಲಿ ಹಾಗೂ ರಾಜ್ಯದ ಗಡಿಯ ಪಟ್ಟಣ ಹಾಗೂ ಗ್ರಾಮಗಳವರೆಗೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದು, ಇದಕ್ಕೆ ಇಂದು ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು ಏಳು ಲಕ್ಷ ಮಹಿಳೆಯರಿದ್ದು, ಈವರೆಗೆ ಕಡಿಮೆ ಪ್ರಮಾಣದಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಯೋಜನೆ ಜಾರಿಯಿಂದ ಎಲ್ಲ ಮಹಿಳೆಯರು ಹೆಚ್ಚಿನ ಲಾಭ ಪಡೆಯಬಹುದಾಗಿದ್ದು, ಸರ್ಕಾರ ಮಹಿಳೆಯರ ಆರ್ಥಿಕ ಭಾರ ಇಳಿಸುವ ಮಹತ್ವದ ಕಾರ್ಯ ಮಾಡಿದೆ ಎಂದು ಹೇಳಿದರು.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ಪಡೆದು ಸರ್ಕಾರಿ ಬಸ್‌ಗಳಲ್ಲಿ ಸಂಚಾರ ಮಾಡಬೇಕು. ಈ ಅವಧಿಯಲ್ಲಿ ಸದ್ಯ ಗುರುತಿಗಾಗಿ ಆಧಾರ್ ಕಾರ್ಡ್, ಮತದಾನ ಗುರುತಿನ ಚೀಟಿ, ಚಾಲನ ಪರವಾನಿಗೆ ಪತ್ರ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಡೆದ ಯಾವುದಾದರೂ ಭಾವಚಿತ್ರವುಳ್ಳ ಗುರುತಿನ ಚೀಟಿ ತೋರಿಸುವ ಮೂಲಕ ಪ್ರಯಾಣದ ಶೂನ್ಯ ಟಿಕೆಟ್ ಪಡೆದು ರಾಜ್ಯ ಮತ್ತು ರಾಜ್ಯದ ಗಡಿಯವರೆಗೆ ಬಸ್ ಸಂಚಾರ ಮಾಡಬಹುದಾಗಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಈ ವೇಳೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಮತ್ತು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಉಪಸ್ಥಿತರಿದ್ದರು.