ಯಾದಗಿರಿ :ರಾಜ್ಯ ಸರ್ಕಾರವು ಮಹತ್ವಾಕಾಂಕ್ಷೆಯೊಂದಿಗೆ ಮುಖ್ಯಮಂತ್ರಿಗಳ ಮುತುವರ್ಜಿಯಿಂದ ರಾಜ್ಯಾದ್ಯಂತ ಈ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಕಡುಬಡವರು, ಸಮಾಜದ ಪ್ರತಿ ವ್ಯಕ್ತಿಗೆ ದೊರಕಿಸಲು ಹೆಚ್ಚಿನ ಆಸಕ್ತಿಯೊಂದಿಗೆ ಜನತಾ ದರ್ಶನ ಹಮ್ಮಿಕೊಂಡಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಲ್ಲಿಸಿದಾಗ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಪರಿಹರಿಸಿದ್ದಲ್ಲಿ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೂ ಒಳ್ಳೆಯ ಹೆಸರು ಬರಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಹೇಳಿದರು.
ನಗರದ ಡಾ ಬಾಬು ಜಗಜೀವನರಾಂ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಯೋಜನೆಗಳಡಿಯ ಸೌಲಭ್ಯ ಹಾಗೂ ನಾಗರಿಕರ ಕುಂದುಕೊರತೆ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ, ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರ ಇದೇ ಪ್ರಥಮ ಬಾರಿಗೆ ಜನತಾ ದರ್ಶನದಂತಹ ಮಹತ್ವಾಕಾಂಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದ್ದು, ಪ್ರತಿ ತಿಂಗಳು 15 ದಿನಗಳಿಗೊಮ್ಮೆ ತಾಲೂಕುವಾರು ಜನತಾ ದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಸಲ್ಲಿಕೆಯಾಗಿರುವ ಅರ್ಜಿಗಳಿಗೆ ತಕ್ಷಣ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ತಿಳಿಸಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಜಿಲ್ಲೆಯ ಬಡ ಜನರಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನ ಹಾಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜನತಾ ದರ್ಶನದಲ್ಲಿ ಒಟ್ಟು 245ಕ್ಕೂ ಹೆಚ್ಚು ಅರ್ಜಿಗಳು (ಐಪಿಜಿಆರ್‌ಎಸ್) ನೋಂದಣಿಯಾಗಿವೆ. ಸಚಿವರು ಇಂದು 35 ಅರ್ಜಿಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.