ಯಾದಗಿರಿ: ಜಿಲ್ಲೆಯಲ್ಲಿ ಕೂಡ ಕೋವಿಡ್-19 ಲ್ಯಾಬ್ ಆರಂಭಿಸಲಾಗಿದೆ. ನಗರದ ಹಳೆ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಸಚಿವ ಚವ್ಹಾಣ್ ಪರಿಶೀಲನೆ ಮಾಡಿ, ಲ್ಯಾಬ್ ಕಾರ್ಯನಿರ್ವಹಣೆ ಕುರಿತಂತೆ ಮಾಹಿತಿ ಪಡೆದರು. ಅಗತ್ಯ ಮುಂಜಾಗ್ರತೆ ಕ್ರಮದೊಂದಿಗೆ ಮಾದರಿಗಳನ್ನು ಪರೀಕ್ಷೆ ಮಾಡಬೇಕು, ಪರೀಕ್ಷೆಯಲ್ಲಿ ಲೋಪವಾಗದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಪ್ರತಿ ನಿತ್ಯ 72 ಜನರ ಮಾದರಿಗಳನ್ನು ಪರೀಕ್ಷೆ ಮಾಡಬಹುದಾಗಿದೆ. ಇಷ್ಟು ದಿನ ಸ್ಯಾಂಪಲ್ ಸಂಗ್ರಹಿಸಿ ಕಲಬುರಗಿ ಜಿಲ್ಲೆಯ ಲ್ಯಾಬ್ಗೆ ಕಳುಹಿಸಲಾಗುತ್ತಿತ್ತು. ಆದರೆ ಈಗ ನಗರದಲ್ಲಿಯೇ ಲ್ಯಾಬ್ ಆರಂಭಿಸಿರುವುದರಿಂದ ಬೇಗನೇ ವರದಿ ಕೈಸೇರಲಿದೆ. ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಳ ಹಿನ್ನೆಲೆ ಜಿಲ್ಲೆಯಲ್ಲಿ ಲ್ಯಾಬ್ ಆರಂಭಿಸಿರುವುದು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಸಂಸದ ರಾಜಾ ಅಮರೇಶ್ವರ ನಾಯಕ, ಜಿಲ್ಲಾಧಿಕಾರಿ ಎಂ ಕುರ್ಮಾರಾವ್, ಜಿ.ಪಂ ಸಿಇಓ ಶಿಲ್ಪಾ ಶರ್ಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.