ಯಾದಗಿರಿ : ರಾಜ್ಯಾದಂತ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಆದಷ್ಟು ಬೇಗ ತೆರೆ ಎಳೆಯಲು ಸರ್ಕಾರದ ಸ್ಪಷ್ಟ ನಿರ್ದೇಶನ ಇದೆ. ಅಲ್ಲದೆ ಸಮವಸ್ತ್ರ ಕಡ್ಡಾಯ ಅಂತಾ ಕೋರ್ಟ್ನಲ್ಲಿಯೂ ಸಹ ಈ ಬಗ್ಗೆ ಕೇಸ್ ನಡೀತಿದೆ. ಮಧ್ಯಂತರ ಆದೇಶವನ್ನ ಸಹ ಕೋರ್ಟ್ ಕೊಟ್ಟಿದೆ ಎಂದು ಸಚಿವ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಹೇಳಿದರು.
ಹಿಜಾಬ್-ಕೇಸರಿ ಶಾಲು ವಿವಾದದ ಕುರಿತಂತೆ ಯಾದಗಿರಿಯಲ್ಲಿ ಸಚಿವ ಸಿ ಎನ್ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿರುವುದು.. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಯಾವುದೇ ಸಮಸ್ಯೆಗಳು ಬಂದರೂ ಎದುರಿಸಿ ಮುಂದಿನ ಹೆಜ್ಜೆ ಹಾಕಲಾಗುವುದು. ಇದೇನು ದೊಡ್ಡ ಸವಾಲ್ ಅಲ್ಲ. ಇದಕ್ಕಿಂತ ದೊಡ್ಡ ದೊಡ್ಡ ಸಮಸ್ಯೆ ಬಂದಿವೆ. ಅದನ್ನು ನಾವು ಬಗೆಹರಿಸುತ್ತೇವೆ. ನಮ್ಮ ಸಮಾಜ ಸಮಸ್ಯೆ ಇಲ್ಲದೇ ಮುಂದೆ ಸಾಗಬೇಕಿದೆ.
ಸೋಮವಾರದಿಂದ ಪ್ರೌಢಶಾಲೆಗಳು ಪ್ರಾರಂಭವಾಗುತ್ತವೆ. ತದನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಕಾಲೇಜಗಳನ್ನು ಸಹ ಆರಂಭಿಸಲಾಗುವುದು. ಬೇರೆ ಬೇರೆ ಇಲಾಖೆಯ ಸಲಹೆ ಪಡೆದು ಬಹುಬೇಗ ಕಾಲೇಜು ಆರಂಭಿಸಲಾಗುತ್ತದೆ ಎಂದರು.
ರಾಮನಗರ ಎಸ್ಪಿಗೆ ಹೆಚ್‌ಡಿಕೆ ಆವಾಜ್ ಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಅಧಿಕಾರಿಗಳಿಗೆ ಉತ್ತಮ ಕಾರ್ಯ ನಿರ್ವಹಿಸಲು ಬಿಡಬೇಕು. ನಮ್ಮ ಉಸ್ತುವಾರಿ ಜಿಲ್ಲೆಯ ಆಡಳಿತ ಹೇಗೆ ಮಾಡಬೇಕೆಂದು ತೋರಿಸಿಕೊಡಬೇಕಿದೆ.
ನಮ್ಮ ಆಡಳಿತದಲ್ಲಿ ನಮ್ಮ ಉಸ್ತುವಾರಿಯಲ್ಲಿ ಅಧಿಕಾರ ಹೇಗಿದೆ ಅಂತಾ ತಿಳ್ಕೊಳ್ಳಲಿ. ಆಡಳಿತ ಚುರುಕಾಗಿ ನಡೆಸಬೇಕು. ಆಡಳಿತ ಮೊದಲು ಹೇಗಿತ್ತು, ಇವಾಗ ಹೇಗಿದೆ ಎಂದ ತಿಳಿದುಕೊಳ್ಳಲಿ. ಯಾರು ಯಾರಿಗೆ ವಾರ್ನ್ ಮಾಡ್ತಾರೆ ನೋಡೋಣ. ನಾವು ಕಾನೂನಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು ಎಂದರು.
ರಾಮನಗರ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಫೈಟ್ ಮಾಡೋಕೆ ಬಂದಿಲ್ಲ. ಕೆಲಸ ಮಾಡೋಕೆ ಬಂದಿದ್ದೀವಿ. ನಮ್ಮದು ಜನಪರ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು. ಸಚಿವ ಸಂಪುಟದ ಬಗ್ಗೆ ಮುಖ್ಯಮಂತ್ರಿಗಳು ಹೇಳ್ತಾರೆ, ನಾನು ಹೇಳಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.