ಗುರುಮಠಕಲ್ :ತಾಲುಕಿನ ಪುಟಪಾಕ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ "ಬದು ನಿರ್ಮಾಣ" ಅಭಿಯಾನಕ್ಕೆ ಚಾಲನೆ ನೀಡಿ ಶಾಸಕ ನಾಗನಗೌಡ ಕಂದಕೂರ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಿಸಿದರು.
"ಬದು ನಿರ್ಮಾಣ" ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿ ಸ್ವಂತ ಊರಿಗೆ ಬಂದ ವಲಸೆ ಕಾರ್ಮಿಕರು ಆತಂಕ ಪಡಬೇಕಾಗಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡಿ ಕೆರೆ ಹೂಳು, ಬದು ನಿರ್ಮಾಣ, ಶಾಲಾ ಕಟ್ಟಡ, ರಸ್ತೆ, ಇತರ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಪಡೆದು ಕೆಲಸವನ್ನು ಪಡೆದುಕೊಳ್ಳಬೇಕು.
ವಲಸಿಗರೇ ಧೈರ್ಯದಿಂದಿರಿ, ನಾವು ನಿಮ್ಮ ಜೊತೆಗಿದ್ದೇವೆ : ಶಾಸಕ ನಾಗನಗೌಡ ಕಂದಕೂರ ಜಮೀನು ಬದು ನಿರ್ಮಾಣ ಅಭಿಯಾನವು ಒಂದು ತಿಂಗಳ ವರೆಗೆ ನಡೆಯಲಿದ್ದು, ಕೆಲಸ ಇಲ್ಲ ಎಂದು ಆತಂಕಕ್ಕೆ ಒಳಗಾಗದೇ ಉದ್ಯೋಗ ಪಡೆಯುವಂತೆ ಸೂಚಿಸಿದ ಅವರು, ಕೊರೊನಾ ಸೋಂಕು ಈಗ ಗುರುಮಠಕಲ್ ವ್ಯಾಪ್ತಿಯಲ್ಲಿಯೂ ಹರಡುತ್ತಿದೆ. ಎಲ್ಲರೂ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಸೂಚಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜದ ಆರೋಗ್ಯವನ್ನು ಕಾಪಾಡುವಂತೆ ಹೇಳಿದರು.
ಗುರುಮಠಕಲ್ ಮತಕ್ಷೇತ್ರದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ ಈ ಭಾಗದ ಜನರಿಗೆ ಕೆಲಸ ನೀಡುವಲ್ಲಿ ದಾಖಲೆ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಕೆಲಸ ಇಲ್ಲ ಎಂದು ಯಾರೂ ಕೈಕಟ್ಟಿ ಕೂರಬೇಡಿ, ಸರಕಾರ ಮತ್ತು ಸ್ಥಳೀಯ ಆಡಳಿತಗಳು ಸದಾ ನಿಮ್ಮೊಂದಿಗಿವೆ. ನಿಮಗಾಗಿಯೇ ನಿರ್ಮಿಸಿದ ಸರಕಾರದ ಯೋಜನೆಗಳ ಲಾಭ ಪಡೆಯುವಂತೆ ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಶರಭೈ, ಯಾದಗಿರಿ ಎಡಿ ಚಂದ್ರಶೇಖರ ಪವಾರ್, ಪಿಎಸ್‌ಐ ಶೀಲಾದೇವಿ ನ್ಯಾಮನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೂರ್ಯಕಾಂತ ಸೇರಿದಂತೆ ಇತರರು ಇದ್ದರು.