ಯಾದಗಿರಿ:ಅದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ದಕ್ಷಿಣ ಕಾಶಿಯಂದೇ ಖ್ಯಾತಿ ಹೊಂದಿದ್ದ ಧಾರ್ಮಿಕ ಜಾತ್ರೆ. ಆ ಜಾತ್ರೆಯಲ್ಲಿ ಮಾತ್ರ ಧಮ್ ಮಾರೋ ಧಮ್.. ಸಾಧು ಸಂತರು, ಕೈಯಲ್ಲಿ ಚಿಲುಮೆ ಹಿಡಿದು ಗಾಂಜಾ ಮತ್ತಿನಲ್ಲಿ ತೇಲಾಡುತ್ತಾರೆ.
ನಿಷೇಧದ ನಡುವೆಯೂ ಕೈಲಾಸ ಕಟ್ಟೆಯಲ್ಲಿ ಗಾಂಜಾ ಗಮ್ಮತ್ತು.. ಒಂದು ಕಡೆ ಜಗದ್ಗುರು ಮೌನೇಶ್ವರನ ಕೃಪೆಗೆ ಪಾತ್ರರಾಗುತ್ತಿರುವ ಭಕ್ತರು, ಮತ್ತೊಂದೆಡೆ ಗಾಂಜಾ ಸೇದುತ್ತಿರುವ ಸಾಧು ಸಂತರು. ಅಂದಹಾಗೆ, ಈ ದೃಶ್ಯಗಳು ಕಂಡು ಬಂದಿರುವುದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಜಗದ್ಗುರು ಮೌನೇಶ್ವರನ ಜಾತ್ರೆಯಲ್ಲಿ. ಮೌನೇಶ್ವರ ಮಂದಿರ ಪಕ್ಕದಲ್ಲಿಯೇ ಕೈಲಾಸ ಕಟ್ಟೆಯಿದ್ದು, ಇಲ್ಲಿ ಚಿಲುಮೆ ಹಿಡಿದು ಸಾಧು ಸಂತರು ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದಾರೆ. ಜಿಲ್ಲಾಡಳಿತದ ನಿಷೇಧದ ನಡುವೆಯೂ ಕೈಲಾಸ ಕಟ್ಟೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಿಂದ ಮೌನೇಶ್ವರನ ಜಾತ್ರೆಗೆ ಆಗಮಿಸಿದ ಸಾಧು ಸಂತರು ಗಾಂಜಾ ಸೇದುತ್ತಾರೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಾಧುಗಳು ಗಾಂಜಾ ಸೇದುವುದೇ ಇಲ್ಲಿನ ವಿಶೇಷ.
ಕೈಲಾಸ ಕಟ್ಟೆಯಲ್ಲಿ ಗಾಂಜಾ ಸೇದುವುದಕ್ಕೆ ಧಾರ್ಮಿಕ ಕಾರಣವಿದೆ. ಶತಮಾನಗಳ ಹಿಂದೆ ಮೌನೇಶ್ವರನ ಶಿಷ್ಯರು ಕೈಲಾಸ ಕಾಣಲು ಕಾಶಿಗೆ ಪಾದಯಾತ್ರೆ ಹೊಗುತ್ತಿದ್ದರಂತೆ. ಆದರೆ ಜಗದ್ಗುರು ಮೌನೇಶ್ವರನು ಶಿಷ್ಯರಿಗೆ ಕಾಶಿಗೆ ತೆರಳಿ ಕೈಲಾಸ ಕಾಣುವುದು ಬೇಡ, ನಾನೇ ಇಲ್ಲೇ ಕೈಲಾಸ ತೋರಿಸುತ್ತೇನೆ ಎಂದು ಹೇಳಿ ಶಿಷ್ಯಂದರಿಗೆ ಕಣ್ಣು ಮುಚ್ಚಿ ಕೈಲಾಸ ತೋರಿಸಿದ್ದರಂತೆ. ಬಳಿಕ ಗಾಂಜಾ ಸೇದಿದ್ದರಂತೆ. ಹೀಗಾಗಿ ಈ ಕಟ್ಟೆಗೆ ಕೈಲಾಸ ಕಟ್ಟೆ ಎಂಬ ಹೆಸರು ಬಂದಿದೆ ಎಂಬುವುದು ವಾಡಿಕೆ. ಹೀಗಾಗಿ, ಭಕ್ತರೇ ಸಾಧು ಸಂತರಿಗೆ ಪ್ರಸಾದ ರೂಪದಲ್ಲಿ ಗಾಂಜಾವನ್ನು ತಂದು ಕೊಡುತ್ತಾರೆ. ಕೇವಲ ಸಾಧುಗಳಲ್ಲದೇ ಇಲ್ಲಿಗೆ ಬಂದ ಕೆಲ ಭಕ್ತರು ಗಾಂಜಾ ಸೇದುತ್ತಾರೆ.
ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸಾಧುಗಳು ಗಾಂಜಾ ಸೇದುತ್ತಿದ್ದರು. ಆದರೆ, ಪೊಲೀಸರು ಕೂಡ ಈ ಬಾರಿ ವ್ಯಾಪಕ ಕಟ್ಟುನಿಟ್ಟಿನ ಕ್ರಮಕೈಗೊಂಡ ಹಿನ್ನೆಲೆ ಗಾಂಜಾ ಸೇದುವದು ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಗಾಂಜಾ ಸೇದುವರ ಮೇಲೆ ಹದ್ದಿನ ಕಣ್ಣಿಟ್ಟು ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದ್ದಾರೆ. ಆದರೆ, ಪೊಲೀಸರ ಕಣ್ಣು ತಪ್ಪಿಸಿ ಅಲ್ಲಲ್ಲಿ ಕೆಲ ಸಾಧುಗಳು ಗಾಂಜಾ ಮತ್ತಿನಲ್ಲಿ ತೇಲಾಡಿದ್ದಾರೆ. ಜಾತ್ರೆಗೆ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ವಿವಿಧ ಭಾಗಗಳಿಂದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮೌನೇಶ್ವರ ಕೃಪೆಗೆ ಪಾತ್ರರಾಗಿದ್ದಾರೆ.