ಸುರಪುರ(ಯಾದಗಿರಿ):ಭಾರತೀಯ ಸಂಸ್ಕೃತಿಯ ಪ್ರತೀಕದಂತಿರುವ ಮಣ್ಣೆತ್ತಿನ ಅಮಾವಾಸ್ಯೆಯ ಮೇಲೂ ಕೊರೊನಾ ಕರಿ ನೆರಳು ಬಿದ್ದಿದೆ. ಮಣ್ಣೆತ್ತಿನ ವ್ಯಾಪಾರವಿಲ್ಲದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಕುಂಬಾರರು.
ಮಣ್ಣೆತ್ತಿನ ಅಮಾವಾಸ್ಯೆಯ ಎತ್ತು ಕೊಳ್ಳುವವರಿಲ್ಲವೆಂದು ವ್ಯಾಪಾರಿಗಳ ಅಳಲು ಅನೇಕ ಆಚರಣೆಗಳು, ಸಂಪ್ರದಾಯಗಳು ಹಾಗೂ ಹಬ್ಬ-ಹರಿದಿನಗಳಿಂದ ಕೂಡಿರುವ ಭಾರತೀಯ ಸಂಸ್ಕೃತಿಯಲ್ಲಿ ಮಣ್ಣೆತ್ತಿನ ಪೂಜೆಗೂ ಕೂಡ ಅದರದ್ದೇ ಆದ ವಿಶೇಷತೆಯಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಜನಸಾಮಾನ್ಯರು ಹಾಗೂ ರೈತಾಪಿ ವರ್ಗ ವಿಜ್ರಂಭಣೆಯಿಂದ ಆಚರಿಸುತ್ತಾರೆ.
ರೈತರು ಹಾಗೂ ಜನಸಾಮಾನ್ಯರು ಕೂಡ ಮಣ್ಣೆತ್ತುಗಳನ್ನು ತಂದು ಮನೆಗಳಲ್ಲಿ ಅಮಾವಾಸ್ಯೆ ದಿನ ಪೂಜೆ ಮಾಡುತ್ತಾರೆ. ಮನೆಯಲ್ಲಿ ಮಾಡಿರುವ ಅಡುಗೆಯ ನೈವೇದ್ಯ ಅರ್ಪಿಸಿ ಆ ವರ್ಷದ ಮಳೆ ಬೆಳೆಯು ಚೆನ್ನಾಗಿರಲೆಂದು ಪ್ರಾರ್ಥಿಸುತ್ತಾರೆ. ಆದರೆ ಕೊರೊನಾ ಕಾರಣದಿಂದ ಈ ವರ್ಷ ಮಣ್ಣೆತ್ತಿನ ವ್ಯಾಪಾರಕ್ಕೂ ಕೂಡ ಕೊರೊನಾ ಎಫೆಕ್ಟ್ ತಟ್ಟಿದಂತಾಗಿದೆ.
ಸುರಪುರ ತಾಲೂಕಿನಾದ್ಯಂತ ಈ ಬಾರಿ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ ಮಂದಗತಿಯಲ್ಲಿ ಕಂಡುಬರುತ್ತಿದೆ. ನಗರದ ಅನೇಕ ಕಡೆಗಳಲ್ಲಿ ಕುಂಬಾರ ಜನಾಂಗದವರು ಮಣ್ಣೆತ್ತುಗಳನ್ನು ಮಾಡಿಕೊಂಡು ತಂದು ಮಾರಾಟಕ್ಕೆ ಇಟ್ಟಿದ್ದರೂ, ಕೊಳ್ಳುವವರ ಸಂಖ್ಯೆ ತೀರ ಕಡಿಮೆ ಇರುವುದರಿಂದ ವ್ಯಾಪಾರವಿಲ್ಲದೆ ಕೊರೊನಾಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ವರ್ಷ ಕೊರೊನಾ ಹಾವಳಿಯಿಂದಾಗಿ ಹೆಚ್ಚಿನ ಜನರು ಮಾರುಕಟ್ಟೆ ಕಡೆ ಬಾರದೆ ಇರುವುದರಿಂದ ಮಾಡಿರುವ ಮಣ್ಣೆತ್ತುಗಳು ವ್ಯಾಪಾರವಾಗದೆ ಹಾಗೇ ಉಳಿಯುತ್ತಿವೆ. ಪ್ರತಿವರ್ಷ ಐದು ನೂರಕ್ಕೂ ಹೆಚ್ಚಿನ ಜೋಡಿ ಮಣ್ಣೆತ್ತುಗಳನ್ನು ಮಾರಾಟ ಮಾಡುತ್ತಿದ್ದೆವು. ಆದರೆ ಈ ವರ್ಷ ಎರಡು ನೂರು ಜೋಡಿ ತಂದಿದ್ದೇವೆ, ಆದರೆ ಜನರು ಕೊಳ್ಳುತ್ತಿಲ್ಲ,ಇದರಿಂದ ನಮಗೂ ತುಂಬಾ ನಷ್ಟವುಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಎಫೆಕ್ಟ್ ಮಧ್ಯೆಯೂ ನಮ್ಮ ದೇಶದ ಸಂಸ್ಕೃತಿಯ ಬಿಂಬವಾಗಿರುವ ಮಣ್ಣೆತ್ತಿನ ಅಮಾವಾಸ್ಯೆಯ ಅಂಗವಾಗಿ ಅಲ್ಲಲ್ಲಿ ಜನರು ಮಣ್ಣೆತ್ತುಗಳನ್ನು ಖರೀದಿಸಿ ಪೂಜೆಗೆ ಕೊಂಡೊಯ್ಯುತ್ತಿದ್ದಾರೆ.