ಸುರಪುರ: ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಸಂಬಳ ಕೊಡದೆ ಜಾತಿ ನಿಂದನೆ ಆರೋಪ: ಮನನೊಂದು ವ್ಯಕ್ತಿ ಆತ್ಮಹತ್ಯೆ - ಕೆಂಭಾವಿ ಪೊಲೀಸ್ ಠಾಣೆ
ವ್ಯಕ್ತಿಯೊಬ್ಬನಿಗೆ ಸಂಬಳ ಕೊಡದೆ, ಜಾತಿನಿಂದನೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದ್ದು, ಅದೇ ಕಾರಣದಿಂದ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
ಬಸಪ್ಪ ತಿಪ್ಪಣ್ಣ ಚಲವಾದಿ (31) ಮೃತ ವ್ಯಕ್ತಿ. ಪಂಪ್ ಆಪರೇಟರ್ ಕೆಲಸ ಮಾಡುತ್ತಿದ್ದ ಈತನಿಗೆ ಕಳೆದ ಎರಡು ತಿಂಗಳಿಂದ ಸಂಬಳ ನೀಡಿರಲಿಲ್ಲ ಎನ್ನಲಾಗಿದೆ. ಗುತ್ತಿಗೆದಾರ ಕೆ. ಭೂಪಾಲ ಮತ್ತು ಕಾಮಗಾರಿ ಮುಖ್ಯಸ್ಥ ಪ್ರಮೋದ್, ಮುಖ್ಯ ಇಂಜಿನಿಯರ್ ಹನುಮಂತರೆಡ್ಡಿ ಜಾತಿ ನಿಂದನೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಹೇಳಲಾಗಿದೆ. ಇಷ್ಟೆ ಅಲ್ಲದೇ ಕೆಂಭಾವಿ ಠಾಣೆಗೆ ಕರೆಸಿ ಪಿಎಸ್ಐ ಸುದರ್ಶನ ರೆಡ್ಡಿ ಬಸಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಇದರಿಂದ ತೀವ್ರವಾಗಿ ನೊಂದಿದ್ದ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಬಸಪ್ಪನನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಹಿನ್ನೆಲೆ ಮೃತನ ಪತ್ನಿಯು ನನ್ನ ಪತಿಯ ಸಾವಿಗೆ ಜಾತಿ ನಿಂದನೆ, ಸಂಬಳ ಕೊಡದಿರುವುದೇ ಕಾರಣ ಎಂದು ಕೆಂಭಾವಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.