ಯಾದಗಿರಿ:ಸಂಬಂಧಿಕರ ಜಮೀನಿನಲ್ಲಿ ಕೂಲಿ ಕೆಲಸಕ್ಕೆಂದು ಹೋಗಿದ್ದ ವೇಳೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಯಾದಗಿರಿಯಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಕ್ಯಾಸಪನಹಳ್ಳಿ ಬಳಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. 38 ವರ್ಷದ ಮಲ್ಲಪ್ಪ ಕೊಲೆಯಾಗಿರುವ ದುರ್ದೈವಿ. ಈತ ಯಾದಗಿರಿ ತಾಲೂಕಿನ ಅಲ್ಲಪುರ ಗ್ರಾಮದ ನಿವಾಸಿಯಾಗಿದ್ದು, ಕೊಲೆಯಾದ ಮಲ್ಲಪ್ಪ ಅವರ ಸಹೋದರ ಸಂಬಂಧಿಕರ ಜಮೀನುಗಳು ಕ್ಯಾಸಪನಹಳ್ಳಿ ಬಳಿಯಿವೆ. ಇದೇ ಜಮೀನಿಗೆ ಕೂಲಿ ಕೆಲಸಕ್ಕೆಂದು ಹೋಗಿದ್ದ ಮಲ್ಲಪ್ಪ ಜಮೀನಿನ ಕಾಲುವೆಯಲ್ಲಿ ಮಣ್ಣು ತೆಗೆಯುವ ಕೆಲಸದಲ್ಲಿ ತೊಡಗಿದ್ದ. ಈ ವೇಳೆ ಕ್ಯಾಸಪನಹಳ್ಳಿಯ ಈಶಪ್ಪ ಎಂಬ ಪಾಪಿ ಹಿಂದಿನಿಂದ ಬಂದು ಮಲ್ಲಪ್ಪನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಇಬ್ಬರ ಜಮೀನು ಜಗಳದಲ್ಲಿ ಹಾರಿಹೋಯ್ತು ಅಮಾಯಕನ ಪ್ರಾಣಪಕ್ಷಿ! ಕೊಲೆ ಆರೋಪಿ ಈಶಪ್ಪ ಹಾಗೂ ಕೊಲೆಯಾದ ಮಲ್ಲಪ್ಪನ ಸಹೋದರ ಸಂಬಂಧಿಗಳ ಜಮೀನುಗಳು ಅಕ್ಕಪಕ್ಕದಲ್ಲೇ ಇವೆ. ಹೀಗಾಗಿ ಹಿಂದೆ ಈಶಪ್ಪ ಹಾಗೂ ಮಲ್ಲಪ್ಪನ ಸಂಬಂಧಿಕರ ಮಧ್ಯೆ ಜಮೀನಿನ ವಿಚಾರವಾಗಿ ಜಗಳವಾಗಿತ್ತು ಅಂತ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇವತ್ತು ಮೃತ ಮಲ್ಲಪ್ಪನ ಸಂಬಂಧಿಕರನ್ನ ಕೊಲೆ ಮಾಡಲು ಈಶಪ್ಪ ಬಂದಿದ್ದ ಎನ್ನಲಾಗುತ್ತಿದೆ. ಆದ್ರೆ ಮಲ್ಲಪ್ಪನ ಸಂಬಂಧಿಕರೆ ಇರಬಹುದು ಎಂದು ತಿಳಿದು ಆರೋಪಿ ಈಶಪ್ಪ ಈ ಅಮಾಯಕನನ್ನ ಕೊಲೆ ಮಾಡಿದ್ದಾನೆ.
ಮಲ್ಲಪ್ಪನಿಗೆ ಕೊಡಲಿ ಏಟು ಬಿಳುತ್ತಿದ್ದಂತೆ ಸಂಬಂಧಿಕರು ಈಶಪ್ಪನನ್ನು ಹಿಡಿಯಲು ಹೋಗಿದ್ದಾಗ ಆರೋಪಿ ಕೊಲೆಗೆ ಬಳಸಿದ್ದ ಕೊಡಲಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ಸ್ಥಳಕ್ಕೆ ಯಾದಗಿರಿ ಎಸ್‌ಪಿ ರಿಷಿಕೇಶ್ ಭಗವಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ.
ಕೂಲಿ ಮಾಡಿ ಬದುಕುತ್ತಿದ್ದ ಮಲ್ಲಪ್ಪ ಯಾರ ಜೊತೆ ಜಗಳ ಮಾಡಿಕೊಂಡವನಲ್ಲ. ಆದ್ರೆ ಇವತ್ತು ಆರೋಪಿ ಈಶಪ್ಪ ಈತನನ್ನ ಕೊಲೆ ಮಾಡಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗೆ ಯಾದಗಿರಿ ಎಸ್‌ಪಿಯವರು ಪ್ರತ್ಯೇಕ ತಂಡವನ್ನು ರಚಿಸಿ ತನಿಖೆಗೆ ಆದೇಶ ನೀಡಿದ್ದಾರೆ.