ಗುರುಮಠಕಲ್:ಇಡೀ ದೇಶವೇ ಲಾಕ್ಡೌನ್ ಆಗಿರುವಾಗ ಕಳ್ಳದಾರಿ ಹಿಡಿದು ಮದ್ಯದಂಗಡಿಯಲ್ಲಿ ಲಾಕ್ ಓಪನ್ ಮಾಡಿ ಯಥೇಚ್ಛವಾಗಿ ಮದ್ಯ ಮಾರಾಟ ನಡೆಸಲಾಗ್ತಿದೆ.
ಸರ್ಕಾರದ ಆದೇಶದ ಹಿನ್ನೆಲೆ ಪಟ್ಟಣದಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೈನ್ಸ್ ಮತ್ತು ಗೋದಾಮಿನ ಬಾಗಿಲಿಗೆ ಸಂಬಂಧಪಟ್ಟ ಇಲಾಖೆಯವರು ಸೀಲ್ ಮಾಡಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಶ್ರೀ ಲಕ್ಷ್ಮಿ ವೈನ್ಸ್ ಮಾಲೀಕರು ಹಿಂದಿನ ಬಾಗಿಲಿಗೆ ಇರುವ ಬೀಗಕ್ಕೆ ರಂಧ್ರ ಹಾಕಿ ಲಾಕ್ ಓಪನ್ ಮಾಡಿ ಕಳ್ಳದಾರಿಯಲ್ಲಿ ಯಥೇಚ್ಛವಾಗಿ ಎಣ್ಣೆ ಮಾರಾಟದಲ್ಲಿ ತೊಡಗಿದ್ದಾರೆ. ಅಲ್ಲದೇ ಮೂರು ಪಟ್ಟು ಹೆಚ್ಚಿನ ದರದಲ್ಲಿ ಎಣ್ಣೆ ಮಾರಾಟ ಮಾಡಿ ಹಣ ದೋಚಿಕೊಳ್ಳುತ್ತಿದ್ದಾರೆ.
ಸಣ್ಣ ಪುಟ್ಟ ಹಳ್ಳಿಗಳಲ್ಲಿ ಚಹಾದ ಅಂಗಡಿ, ಕಿರಾಣಾ ಅಂಗಡಿಗಳನ್ನು ತೆರೆಯಲು ಬಿಡದೆ ಬಿಗಿ ಬಂದೋಬಸ್ತ್ ಮೂಲಕ ಅವುಗಳನ್ನು ಮುಚ್ಚಿ ಚಹಾ ಸಂಗ್ರಹಿಸುವ ಥರ್ಮಸ್‌ಗಳನ್ನು, ತೂಕದ ಕಲ್ಲು ಮತ್ತು ತಕ್ಕಡಿ ಕೂಡಾ ಅಧಿಕಾರಿಗಳು ವಶಪಡಿಸಿಕೊಂಡು ಬಂದಿರುವ ನಿದರ್ಶನಗಳು ಇವೆ.
ಈ ಮದ್ಯದ ದಂಧೆ ಕೂಡಾ ಪೊಲೀಸರಿಗೆ ತಿಳಿದಿದ್ದು, ಸುಮ್ಮನಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಈ ಕಳ್ಳದಂಧೆ ಒಂದೆರಡು ವಾರಗಳಿಂದ ನಡೆಯುತ್ತಿದೆ. ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿದರೆ ಅದು ನಮಗೆ ಸಂಬಂಧವಿಲ್ಲ ಎಂದು ಉತ್ತರ ನೀಡುತ್ತಾರೆ.
ಅಬಕಾರಿ ಅಧಿಕಾರಿಗಳಿಗೆ ಸಂಪರ್ಕಿಸಿದರೆ ಇದು ನಮ್ಮ ಗಮನಕ್ಕಿಲ್ಲ, ಪರಿಶೀಲಿಸುತ್ತೇವೆ ಎಂದು ಮಾತನಾಡುವ ಮೊದಲೇ ಕರೆ ಕಟ್ ಮಾಡಿ ತಮ್ಮ ಬೇಜವಾಬ್ದಾರಿತನ ತೋರುತ್ತಿರುವುದನ್ನು ಗಮನಿಸಿದರೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.
ಯಾದಗಿರಿ ಜಿಲ್ಲಾ ಅಬಕಾರಿ ಅಧಿಕಾರಿ ಶಶಿಕಲಾ ಒಡೆಯಾರ್ ಪ್ರತಿಕ್ರಿಯಿಸಿ, ಕಾಳಸಂತೆಯಲ್ಲಿ ಮದ್ಯ ಮಾರಾಟವಾಗುತ್ತಿರುವ ಕುರಿತು ಶಹಪೂರ, ಸುರಪೂರ ತಾಲೂಕುಗಳಲ್ಲಿ ಈಗಾಗಲೇ ಮೂರು ಪ್ರಕರಣ ದಾಖಲಿಸಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ತನಿಖೆ ನಡೆಸಿ ಮದ್ಯ ಮಾರಾಟ ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.