ಯಾದಗಿರಿ: ಮುಂದಿನ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಜೋರಾಗಿದೆ ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಇಲ್ಲಿನ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು- ಬೆಂಗಳೂರು ಎಕ್ಸಪ್ರೆಸ್ ವೇ ಮಾಡಿದ್ದು ಬಿಜೆಪಿ ಹಾಗೂ ಸಂಸದ ಪ್ರತಾಪಸಿಂಹ ಮಾತ್ರ. ಅದು ಮಾಡಿದ್ದು ನಾವು ನೀವು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಮುಂದೆ ಬಂದರು.
ಆದರೆ, ಮೊನ್ನೆ ಮಳೆ ಬಂದು ರಸ್ತೆ ಮೇಲೆ ನೀರು ನಿಂತಿದ್ದಾಗ ಈ ವಿಪಕ್ಷಗಳು ಬಿಜೆಪಿಯ ಯೋಜನೆ ಸರಿಯಿಲ್ಲ ಎಂದು ಟೀಕಿಸಿದ್ದರು. ಒಳ್ಳೆಯದಿದ್ದರೆ ತಮ್ಮದೆಂದು, ಒಂದಿಷ್ಟು ಲೋಪ ಕಂಡುಬಂದರೆ ಅದು ಬಿಜೆಪಿಯದ್ದೆಂದು ಟೀಕಿಸುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಣೆಬರಹವೇ ಸರಿಯಿಲ್ಲ ಎಂದು ಸೂರ್ಯ ವಾಗ್ದಾಳಿ ನಡೆಸಿದರು.
ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಇಲ್ಲಿ ಬಂದಿರಲಿಲ್ಲ. ಅವರೆಲ್ಲ ಕ್ವಾರೈಂಟನ್‌ನಲ್ಲಿ ಇದ್ದರು. ಆಗ ಬಿಜೆಪಿ ಯುವ ಕಾರ್ಯಕರ್ತರು ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಲು ಬಂದರು. ಪ್ರಕೃತಿಯ ವಿಕೋಪದ ಸಂದರ್ಭದಲ್ಲಿಯೂ ಕೂಡಾ ಬಿಜೆಪಿ ಕಾರ್ಯಕರ್ತರು ನೆರವಿಗೆ ಧಾವಿಸಿದ್ದಾರೆ ಎಂದು ಪ್ರಶಂಸಿಸಿದರು.
ಮೋದಿ ವಿರುದ್ಧ ನಿಂದನೆಗೆ ಶಿಕ್ಷೆ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೆ ಮಾಡಿದ ಆರೋಪದಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶಿಕ್ಷೆ ಪ್ರಕಟ ಕುರಿತು ಬಗ್ಗೆ ಮಾತನಾಡಿದ ಅವರು, ಸೂರತ್ ಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇನೆ. ರಾಹುಲ್ ಗಾಂಧಿ ಇಂದಿನ ಕೇಸ್ ಸೇರಿದಂತೆ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ.