ಯಾದಗಿರಿ: ಹಸಿರು ವಲಯದಲ್ಲಿದ್ದ ಯಾದಗಿರಿ ಜಿಲ್ಲೆಯಲ್ಲಿ ದಿನಗಳು ಉರುಳಿದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ರೆಡ್ ಝೋನ್ ಆಗಿ ಪರಿಣಮಿಸಿದೆ. ಹೀಗಾಗಿ ಸೋಂಕಿತರ ಜೊತೆಗೆ ಸಾಮಾನ್ಯ ರೋಗಿಗಳು ಸಹ ಸೂಕ್ತ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಸರಿಯಾದ ಚಿಕಿತ್ಸೆ ಇಲ್ಲದೆ ರೋಗಿಗಳು ನರಕ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ವೈದ್ಯಕೀಯ ಸಲಕರಣೆಗಳು ಮತ್ತು ಹಾಸಿಗೆಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇನ್ನೂ ಉದ್ಘಾಟನೆಯಾಗದ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗ್ತಿದೆ. ಹಳೇ ಜಿಲ್ಲಾಸ್ಪತ್ರೆಯಲ್ಲಿ ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ಕೊಡಲಾಗ್ತಿದೆ. ಇಲ್ಲಿ ಸೌಲಭ್ಯಗಳಿಲ್ಲದ ಕಾರಣ ತುರ್ತು ಪ್ರಕರಣಗಳನ್ನು ಕಲಬುರಗಿ ಮತ್ತು ರಾಯಚೂರು ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗ್ತಿದೆ. ಆದರೆ ಎಷ್ಟೋ ಮಂದಿ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇದು ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ ಎಂಬುದು ಸ್ಥಳೀಯರ ಮಾತು.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೇ ಜಿಲ್ಲೆಯಲ್ಲೀಗ 4 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಸೌಲಭ್ಯಗಳ ಕೊರತೆ ಹೀಗೆಯೇ ಮುಂದುವರೆದರೆ ಸೋಂಕಿತರ ಜೊತೆಗೆ ಸಾಮಾನ್ಯ ರೋಗಿಗಳು ಸಹ ತೀವ್ರ ತೊಂದರೆ ಅನುಭವಿಸಲಿದ್ದಾರೆ. ಕೂಡಲೇ ಜಿಲ್ಲಾಸ್ಪತ್ರೆಯ ಕುಂದು-ಕೊರತೆಗಳನ್ನು ನೀಗಿಸಿ ಬಡ ರೋಗಿಗಳಿಗೆ ಅನುಕೂಲ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.