ಗುರುಮಠಕಲ್:ಕೇಶ್ವಾರ ಗ್ರಾಮದ ಹೊರವಲಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನು ರಾಜು ಅಲಿಯಾಸ್ ಶಿವಾರೆಡ್ಡಿ ಎಂಬಾತ ಬುಲೆಟ್ ಬಾಬಾ ಎಂದೇ ಪ್ರಸಿದ್ಧಿ ಪಡೆದಿದ್ದು, ಇದೀಗ ಬಾಬಾ ಅಸಲಿ ಮುಖ ಬಯಲಾಗಿದೆ. ಬಾಬಾ ಹತ್ತಿ.ರ ಯಾವುದೇ ಪವಾಡ ನಡೆಸುವ ಶಕ್ತಿಯಿಲ್ಲ. ಆತನೊಬ್ಬ ಮೋಸಗಾರ ಎಂದು ಆತನ ಮೊದಲ ಪತ್ನಿ ಕವಿತಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಹಿನ್ನಲೆ:ಈ ಬಾಬಾ ಬುಲೆಟ್ ಬಾಬಾ ಅಲಿಯಾಸ್ ಶಿವಾರೆಡ್ಡಿ ಎಂದು ಹೆಸರು ಹೇಳಿಕೊಂಡು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ. ಮೊದಲಿಗೆ ಸುಮಾರು 5 ವರ್ಷಗಳ ಹಿಂದೆ ಯಾನಾಗುಂದಿಗೆ ಬಂದು ಅಲ್ಲಿಯೇ ಆಯುರ್ವೇದ ಔಷಧಿ ನೀಡುತ್ತಾ, ಕೇಶ್ವಾರ ಗ್ರಾಮಸ್ಥರೊಬ್ಬರ ಮೂಲಕ ಗ್ರಾಮಕ್ಕೆ ಮಹಿಳೆಯೊಂದಿಗೆ ಬಂದು ನೆಲೆಸಿದರು. ನಂತರ ಆ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ತಾನೊಬ್ಬ ಬಾಬಾ ಆಗಿದ್ದು, ತನ್ನಲ್ಲಿ ಶಕ್ತಿ ಇದೆ ಎಂದು ಪ್ರಚಾರ ಮಾಡತೊಡಗಿದ. ಗ್ರಾಮಸ್ಥರಿಗೆ, ಸುತ್ತಮುತ್ತಲಿನ ಜನರಿಗೆ ತನ್ನ ಕೈಚಳಕದಿಂದ ಮೋಡಿ ಮಾಡುತ್ತಾ ಸಾಗಿದ ಆತ, ಜೊತೆಗೆ ಬಂದಿದ್ದ ಆ ಮಹಿಳೆಯನ್ನು ತನ್ನ ಹೆಂಡತಿ ಎಂದು ಹೇಳಿಕೊಂಡಿದ್ದ. ತನ್ನ ಮೋಡಿಯಿಂದ ಭಕ್ತರನ್ನು ಸೆಳೆದು ಹಲವರಿಂದ ಹಣ ವಸೂಲಿ ಮಾಡಿಕೊಂಡಿದ್ದಾನೆ ಎಂಬ ಆರೋಪಗಳಿವೆ.
ಬಾಬಾನ ಕೈಚಳಕಕ್ಕೆ ಮರುಳಾದ ಜನರು, ಗ್ರಾಮದಲ್ಲೊಬ್ಬರ ಹೊಲದಲ್ಲಿ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿ ಅವರ ಹೊಲದಲ್ಲಿಯೇ ಠಿಕಾಣಿ ಹೂಡಿ ಅಲ್ಲಿಯೇ ಆಶ್ರಮ ನಿರ್ಮಾಣ ಮಾಡಿದ್ದಾನೆ. ನಿತ್ಯವು ಬುಲೆಟ್ ವಾಹನದಲ್ಲಿ ಭಾರೀ ಕೂದಲು ಬಿಟ್ಟ ದೈತ್ಯಾಕಾರದ ದೇಹ, ವೇಷ ಭೂಷಣದಿಂದ ಸಂಚರಿಸುತ್ತಾ ಬುಲೆಟ್ ಬಾಬಾ ಎಂದು ಪ್ರಸಿದ್ಧಿಯಾದ. ಈತನ ವಿರುದ್ಧ ಮಾತನಾಡುವವರಿಗೆ ಮತ್ತು ಹಿನ್ನೆಲೆ ಗೊತ್ತಾದವರಿಗೆ ಹಣ ನೀಡಿ ಬಣ್ಣ ಬಯಲಾಗದಂತೆ ನೋಡಿಕೊಂಡಿದ್ದ ಎನ್ನಲಾಗುತ್ತಿದೆ.
ಹಲವರ ಜೊತೆ ಸಂಬಂಧ:ಮೂಲತಃ ತೆಲಂಗಾಣದ ವರಂಗಲ್‌ನ ಲೇಬರ್ ಕಾಲೋನಿಯ ಜನ್ನು ರಾಜು ಜನ್ನು ಚಾರ್ಲ್ಸ್ ಆದ ಈತ 2003ರಲ್ಲಿ ಕವಿತಾ ಜನ್ನು ಎಂಬುವರನ್ನು ಅಂತರ್ಜಾತಿ ವಿವಾಹವಾಗಿದ್ದಾನೆ. ನಂತರ ಆಯುರ್ವೇದ ಔಷಧಿ ವ್ಯವಹಾರ ಮಾಡಿಕೊಂಡಿದ್ದ ಈತ ಇತರೆ ಮಹಿಳೆಯರೊಂದಿಗೆ ಸಂಗ ಬೆಳೆಸಿ, ಸಂಸಾರಸಲ್ಲಿ ಕಲಹ ಪ್ರಾರಂಭವಾಗಿತ್ತು. ವರದಕ್ಷಣೆ ತರುವಂತೆ ಹೆಂಡತಿಯನ್ನು ಪೀಡಿಸಲು ಪ್ರಾರಂಭಿಸಿ ಮನೆ ತೊರೆದು ಹೋಗಿದ್ದಾನೆ. ನಂತರ ಮೊದಲ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ನಂತರ 2006 ಮತ್ತು 2009ರಲ್ಲಿಯೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಿಂದ ಹೊರ ಹೋದ ಪತಿಯನ್ನು ಮನೆಗೆ ಕರೆ ತರಲು ಪತ್ನಿ ಕವಿತ ವಿವಿಧ ಗ್ರಾಮಗಳಿಗೆ, ಜಿಲ್ಲೆಗಳಿಗೆ ಅಲೆದಾಡಿದ್ದಾರೆ. ಪಠಾಣ ಚೆರುನಲ್ಲಿನ ಮಹಿಳೆ, ಮನೆ ಕೆಲಸದಾಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ನಂತರ ನಲಗೊಂಡದ ಮಹಿಳೆಯೊಂದಿಗೆ ಸಂಬಂಧ ಹೊಂದಿ ಇಲ್ಲಿಯ ಕೇಶ್ವರ ಗ್ರಾಮದಲ್ಲಿ ನೆಲಿಸದ್ದಾನೆ ಎನ್ನಲಾಗಿದೆ.
ಗುರುಮಠಕಲ್‌ನ ಹಲವು ರಾಜಕೀಯ ಮುಖಂಡರುಗಳೊಂದಿಗೆ ಸಂಪರ್ಕ ಹೊಂದಿದ್ದು, ರಾಜಕೀಯ ವ್ಯಕ್ತಿಗಳು ಅಲ್ಲಿಗೆ ಹೋಗಿ ಬರುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. "ಈತ ಯಾವುದೇ ಬಾಬಾ ಅಲ್ಲ. ಈತನ ಬಳಿ ಯಾವ ಶಕ್ತಿಯು ಇಲ್ಲ. ಆಯುರ್ವೇದ ಔಷಧಿ ಕುರಿತು ತಿಳಿದಿರುವ ಈತ ಕುಂಕುಮ ಅರಿಶಿಣದಲ್ಲಿ ಔಷಧಿಯನ್ನು ಸೇರಿಸಿ ಜನರಿಗೆ ನೀಡುವುದರ ಮೂಲಕ ಎಲ್ಲರನ್ನು ಮೋಸ ಮಾಡುತ್ತಾ (ಹಣ ಲೂಟಿ ಮಾಡುತ್ತಾ) ಬೇರೆ-ಬೇರೆ ಕಡೆ ಪ್ರಯಾಣ ಬೆಳೆಸುತ್ತಾನೆ. ಈತನ ಕೃತ್ಯಗಳಿಂದ ಬೇಸತ್ತಿದ್ದೇನೆ. ನನ್ನ ಮಕ್ಕಳನ್ನು ಸಾಕಲು ನಾನು ನಾನಾ ಕಷ್ಟಗಳನ್ನು ಅನುಭವಿಸುತ್ತಿದ್ದು, ನನ್ನ ಮಾವ (ಜನ್ನು ರಾಜುವಿನ ತಂದೆ)ನ ಮನೆಯಲ್ಲಿಯೇ ವಾಸವಾಗಿದ್ದೇನೆ. ಈತನ ಬಲೆಗೆ ಇನ್ಯಾವ ಮಹಿಳೆ ಕೂಡ ಬಲಿಯಾಗಬಾರದು ಎಂದು ನನ್ನ ಕಳಕಳಿ ಇದೆ" ಎಂದು ಈಟಿವಿ ಭಾರತದ ಜೊತೆ ಬುಲೆಟ್ ಬಾಬಾನ ಮೊದಲ ಪತ್ನಿ ಕವಿತಾ ಜನ್ನು ಅಳಲು ತೋಡಿಕೊಂಡಿದ್ದಾರೆ.