ಕಲಬುರಗಿ:ಕನಕದಾಸರು ಶ್ರೇಷ್ಠ ಕವಿಗಳು. ಕನ್ನಡ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ಜೀವನ ಸಾಧನೆಯ ಮೂಲಕ ಕನಕದಾಸರು ಪ್ರಸಿದ್ಧಿ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಬಿ.ಶರತ್ ಅಭಿಪ್ರಾಯಪಟ್ಟರು.
ಸಂತ ಕನಕದಾಸ ಜಯಂತಿ ಸಂಭ್ರಮ.. ನಗರದ ಡಾ.ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಂಯುಕ್ತಾಶ್ರದಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕನಕದಾಸರು ಕೃಷ್ಣನನ್ನೇ ಭಕ್ತಿಯಿಂದಲೇ ಒಲಿಸಿಕೊಂಡವರು. ವೃತ್ತಿಪರವಾಗಿ ಮಾತ್ರವಲ್ಲದೆ ಜೀವನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ ಯೋಧ. ಗೌರವ ಮತ್ತು ಸಹಿಷ್ಣುತೆಯಿಂದಲೇ ವಿಶ್ವಗುರು ಎನಿಸಿಕೊಂಡಿದ್ದಾರೆ. ಸೂರ್ಯಚಂದ್ರ ಇರುವವರೆಗೂ ಕನಕದಾಸರ ಆದರ್ಶಗಳು ಪ್ರಸ್ತುತವಾಗಿರುತ್ತವೆ ಎಂದರು.
ಶ್ರೇಷ್ಠ ವ್ಯಕಿಗಳ ಜಯಂತಿಗಳಲ್ಲಿ ಡಿಜೆ ಬಳಕೆ ಮಾಡುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ. ಜೊತೆಗೆ ಶ್ರೇಷ್ಠ ವ್ಯಕ್ತಿಗಳ ಜಯಂತಿ ದಿನಾಚರಣೆ ವೇಳೆ ಸಿನಿಮಾ ಹಾಡುಗಳನ್ನು ಬಳಸುವುದು ಸರಿಯಲ್ಲ. ಇದರಿಂದ ನಮ್ಮ ಮಹಾನ್ ವ್ಯಕ್ತಿಗಳ ಜಯಂತಿಗಳು ಅರ್ಥ ಕಳೆದುಕೊಳ್ಳುತ್ತದೆ. ಆದರಿಂದ ಈ ರೀತಿಯ ಯಾವುದೇ ಡಿಜೆಗಳನ್ನು ಬಳಸದಂತೆ ಮನವಿ ಮಾಡಿದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ತಿಪಣಪ್ಪಾ ಕಮಕನೂರ್ ಮಾತನಾಡಿ, ಕುರುಬ ಹಾಗೂ ಕಬ್ಬಲ್ಲಿಗ ಸಮುದಾಯವನ್ನು ಬೀದರ್ ಮಾದರಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಂತೆ ಹಾಗೂ ಕನಕದಾಸ ಪ್ರತಿಮೆಯನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ ತಿಂಥಣಿಯ ಕಾಗಿನೆಲೆ ಕನಕಗುರು ಪೀಠದ ಪೂಜ್ಯ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮೀಜಿ, ವಿಧಾನ ಪರಿಷತ್ತಿನ ಶಾಸಕರಾದ ಬಿ ಜಿ ಪಾಟೀಲ್, ಶಾಸಕರರಾದ ದತ್ತಾತ್ರೇಯ ಪಾಟೀಲ್ ರೇವೂರ್,ಬಸವರಾಜ್ ಮತ್ತಿಮೂಡ್,ಎಸ್ಪಿ ಯಡಾ ಮಾರ್ಟಿನ್,ಜಿಲ್ಲಾ ಪಂಚಾಯತ್ ಸಿಇಒ ಡಾ.ರಾಜಾ ಪಿ, ಡಿಸಿಪಿ ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ, ಪ್ರೊಬೇಷನರ್ ಐಎಎಸ್ ಅಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ ಬಳಬಟ್ಟಿ,ಉಪನ್ಯಾಸಕ ಡಾ.ಬಾಬು ಪೂಜಾರಿ ಸೇರಿ ಅನೇಕರು ಉಪಸ್ಥಿತರಿದ್ದರು.
ಯಾದಗಿರಿಯಲ್ಲೂ ಕನಕದಾಸ ಜಯಂತಿ ಸಂಭ್ರಮ:
ಭಕ್ತ ಕನಕದಾಸರ ಜಯಂತಿಯನ್ನು ಯಾದಗಿರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡು ಕನಕದಾಸರ ಜಯಂತಿಯನ್ನು ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕನಕದಾಸರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಕನಕ ವೃತ್ತದಿಂದ ವಿದ್ಯಾಮಂಗಲ ಕಾರ್ಯಾಲಯದವರೆಗೆ ವಿವಿಧ ಕಲಾತಂಡಗಳೊಂದಿಗೆ ಕನಕದಾಸರ ಭಾವ ಚಿತ್ರ ಮೆರವಣಿಗೆ ನಡೆಸಲಾಯಿತು.