ಗುರುಮಠಕಲ್: ಹಲವಾರು ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್-ಕರ್ನಾಟಕ ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದೆ. ಸ್ವಾತಂತ್ರ‍್ಯ ಹೋರಾಟದ ರೋಚಕ ಇತಿಹಾಸ ಹಾಗೂ ಅದರ ಮಹತ್ವವನ್ನು ನಾವೆಲ್ಲರೂ ಅರಿತು, ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸಹ ಸ್ಮರಿಸಿ, ಗೌರವಿಸಬೇಕಾಗಿದೆ ಎಂದು ಉಪನ್ಯಾಸಕ ಹಣಮಂತಪ್ಪ ಹಂದರಿಕಿ ಹೇಳಿದರು.
ಪಟ್ಟಣದ ಜವಹಾರಲಾಲ್ ನೆಹರು ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ಇಡೀ ದೇಶ ಸ್ವಾತಂತ್ರ‍್ಯದ ಸಂಭ್ರಮ ಅನುಭವಿಸುತ್ತಿದ್ದರೆ, ಹೈದ್ರಾಬಾದ್-ಕರ್ನಾಟಕ ಭಾಗದ ಜನರು ರಜಾಕಾರರ ದಬ್ಬಾಳಿಕೆಗೆ ಸಿಲುಕಿ ಶೋಷಣೆಯನ್ನು ಅನುಭವಿಸುತ್ತಿದ್ದರು.
ಆಗಿನ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು, ದಿಟ್ಟತನದಿಂದ ಕೈಗೊಂಡ ಸೈನಿಕ ಕಾರ್ಯಾಚರಣೆಯಲ್ಲಿ, ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ ಹೈದ್ರಾಬಾದ್-ಕರ್ನಾಟಕ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ‍್ಯ ಪಡೆಯಿತು .
ಭಕ್ತಿ, ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸದ ಜಗತ್ತಿನ ಅತ್ಯಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು ಎಂದರು.
ಪೂಜ್ಯ ಶ್ರೀ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಜಿ ದಿವ್ಯ ಸಾನಿದ್ಯ ವಹಿಸಿದರು. ತಹಸೀಲ್ದಾರರಾದ ಸಂಗಮೇಶ ಜಿಡಗೆ, ಸಿಪಿಐ ದೇವೇಂದ್ರಪ್ಪ ಧೂಳಖೇಡ್, ಪ್ರಚಾರ್ಯರಾದ ಮೋನಪ್ಪ ಗಚ್ಚಿಮನಿ, ಪುರಸಭೆ ವ್ಯವಸ್ಥಾಪಕರು ಮಲ್ಲಿಕಾರ್ಜುನ, ಶಿಕ್ಷಣ ಸಂಯೋಜಕ ಶಿವರಾಜ ಸಾಕಾ, ಸಿಆರ್‌ಪಿ ನಾರಾಯಣರೆಡ್ಡಿ ಇತರರು ಭಾಗವಹಿಸಿದರು.