ಸುರಪುರ:ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳು, ವಿಶೇಷ ಅನುದಾನ ನೀಡಿ ಅವಶ್ಯಕ ಕಾಮಗಾರಿಗಳ ನಿರ್ಮಾಣಕ್ಕೆ ಮುಂದಾಗುತ್ತದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
2001-02ನೇ ಸಾಲಿನಲ್ಲಿ ಅಂದಿನ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ವೆಂಕಟೇಶ ನಾಯಕ ಅರಕೇರಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸುರಪುರ ತಾಲೂಕಿನ ಕಕ್ಕೇರಾದಲ್ಲಿ ಬಸ್ ನಿಲ್ದಾಣವನ್ಞು ನಿರ್ಮಿಸಲಾಗಿದೆ.
ಅದೇ ಕಕ್ಕೇರಾ ಗ್ರಾಮದ ರೈತ ಹೋರಾಟಗಾರ ನಂದಣ್ಣ ಎಂಬುವರು ಒಂದು ಎಕರೆ ಜಮೀನು ನೀಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಆದರೆ ಕಾಮಗಾರಿ ನಿರ್ಮಾಣ ಹೊಣೆಹೊತ್ತ ಕರ್ನಾಟಕ ಭೂ ಸೇನಾ ನಿಗಮದ ಅಧಿಕಾರಿಗಳು ಕಳೆದ 17 ವರ್ಷವಾದರೂ ಸಂಪೂರ್ಣ ಕಾಮಗಾರಿ ಮುಗಿಸದೆ ಅರ್ಧಂಬರ್ಧ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದರಿಂದ ಈಗ ಬಸ್ ನಿಲ್ದಾಣ ದನಗಳ ದೊಡ್ಡಿಯಾಗಿ ಮಾರ್ಪಟ್ಟಿದೆ.