ಗುರುಮಠಕಲ್: ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಕಳೆದ ನಾಲ್ಕುವರೆ ವರ್ಷದಿಂದ ಕ್ಷೇತ್ರಕ್ಕೆ ಕಾಲಿಡದೆ ಇದೀಗ ದಿಢೀರನೆ ಬಂದು ಕಣ್ಣೀರು ಹಾಕುತ್ತಿದ್ದಾರೆ. ಒಂದು ಬಾರಿ ಸೋತದ್ದಕ್ಕೆ ಇಷ್ಟೊಂದು ನೋವಾಗಿರಬೇಕಾದರೆ ಸತತ 40 ವರ್ಷಗಳಿಂದ ಸೋಲನ್ನೇ ಗೆಲುವು ಎಂದು ಸ್ವೀಕರಿಸಿದ್ದ ನಮಗೆಷ್ಟು ನೋವಾಗಿರಬೇಡ?. ಇಂಥ ಮೊಸಳೆ ಕಣ್ಣೀರಿಗೆಲ್ಲ ಕ್ಷೇತ್ರದ ಜನತೆ ಮರುಳಾಗುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಟಾಂಗ್ ಕೊಟ್ಟರು.
ನಗರದ ಜೆಡಿಎಸ್ ಭವನದಲ್ಲಿ ಕೊರಮ ಸಮುದಾಯದ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುಮಠಕಲ್ ಮತಕ್ಷೇತ್ರದ ಬಗ್ಗೆ ಕಾಳಜಿ ಇದ್ದವರು ಅನುದಾನವನ್ನು ತರದೇ, ಸಿಎಂಗೆ ಪತ್ರ ಬರೆದು ನಾವು ಹೇಳಿದವರಿಗೆ ಕೆರೆ ತುಂಬುವ ಯೋಜನೆಯ ಗುತ್ತಿಗೆದಾರಿಕೆ ನೀಡಬೇಕೆಂದು ಬಾಬುರಾವ್ ಮನವಿ ಸಲ್ಲಿಸಿದ್ದಾರೆ. ನಾಲ್ಕು ವರ್ಷದ ನಂತರ ಮತಕ್ಷೇತ್ರಕ್ಕೆ ಬಂದು ಜನರ ಮುಂದೆ ಮೊಸಳೆ ಕಣ್ಣೀರು ಸುರಿಸುತ್ತಿದ್ದೀರಿ ಎಂದು ಹೇಳಿದರು.