ಗುರುಮಠಕಲ್ (ಯಾದಗಿರಿ): ಇಲ್ಲಿನ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಕೊನೆಗೂ 'ದಳ'ಪತಿಗಳು ಯಶಸ್ವಿಯಾಗಿದ್ದಾರೆ. ಅಧ್ಯಕ್ಷರಾಗಿ ಕಂದಕೂರ ತಾಲೂಕು ಪಂಚಾಯತ್ ಸದಸ್ಯ ಈಶ್ವರ ನಾಯಕ್ ಹಾಗೂ ಉಪಾಧ್ಯಕ್ಷೆಯಾಗಿ ರಾಮಲಿಂಗಮ್ಮ ಅವಿರೋಧವಾಗಿ ಆಯ್ಕೆಯಾದರು.
12 ಜನರ ಸದಸ್ಯ ಬಲ ಹೊಂದಿರುವ ತಾ.ಪಂನಲ್ಲಿ ಜೆಡಿಎಸ್ 4, ಕಾಂಗ್ರೆಸ್ 6 ಹಾಗೂ ಬಿಜೆಪಿಯ ಇಬ್ಬರು ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ತಾ.ಪಂ ಗದ್ದುಗೆಯನ್ನು ಕೈವಶ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ 6 ಸದಸ್ಯರ ಬಲವನ್ನು ಹೊಂದಿದ್ದರೂ ಮೀಸಲಾತಿಯ ಅಭ್ಯರ್ಥಿಯಿಲ್ಲದ ಕಾರಣ ಅಧಿಕಾರದಿಂದ ವಂಚಿತವಾಯಿತು.
ಗುರುಮಠಕಲ್ ಗ್ರಾಮ ಪಂಚಾಯಿತಿ ಆಡಳಿತ ಜೆಡಿಎಸ್ ಪಾಲು ಪ್ರತಿಪಕ್ಷಗಳ ನ್ಯೂನತೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ತಂತ್ರ ಹೆಣೆದು ತಮ್ಮ 4 ಜನ ಸದಸ್ಯರ ಬಲದೊಂದಿಗೆ ಇತರೆ ಸದಸ್ಯರ ವಿಶ್ವಾಸ ಪಡೆದು ನೂತನ ತಾ.ಪಂಗೆ ಮೊದಲ ಬಾರಿಗೆ ಅವಿರೋಧವಾಗಿ ಗದ್ದುಗೆ ಏರಿದ ಖ್ಯಾತಿ ಪಡೆದರು.
ಈ ಕುರಿತು ಅಧಿಕೃತವಾಗಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮಾಹಿತಿ ನೀಡಿದ್ದು, ಅಧ್ಯಕ್ಷ ಸ್ಥಾನಕ್ಕೆ ನಾಗೇಶ ಚಂಡರಕಿ ನಾಮಪತ್ರ ಹಿಂಪಡೆದ ಹಿನ್ನೆಲೆ ಈಶ್ವರ ನಾಯಕ್ ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಿದರು.
ನೂತನವಾಗಿ ರಚನೆಯಾದ ಗುರುಮಠಕಲ್ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪಕ್ಷ ಭೇದ ಮರೆತು ಎಲ್ಲಾ ಸದಸ್ಯರು ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳು. ಈ ಗಡಿ ಭಾಗವು ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯಲು ಎಲ್ಲರೂ ಶ್ರಮಿಸೋಣ ಎಂದು ಜೆಡಿಎಸ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ತಿಳಿಸಿದರು.