ಗುರುಮಠಕಲ್ (ಯಾದಗಿರಿ):ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ತಿಳಿಸಿದರು.
ಗುರುಮಠಕಲ್ ಪುರಸಭೆ ಅಧ್ಯಕ್ಷರ ನೇತೃತ್ವದಲ್ಲಿ ಪಟ್ಟಣದ ಹೀರಾ ಗಾರ್ಡನ್ನಲ್ಲಿ ಗ್ರಾ.ಪಂ ಮತ್ತು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಚುನಾಯಿತ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಗುರುಮಠಕಲ್ ಜನತೆ ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡು ಕಂದಕೂರ ಕುಟುಂಬಕ್ಕೆ ಅವಕಾಶ ನೀಡಿದೆ. ಸದ್ಯದ ವಿಧಾನ ಪರಿಷತ್ ಚುನಾವಣೆಯನ್ನು ಕೇವಲ ಚುನಾವಣಾ ದೃಷ್ಟಿಯಿಂದ ನೋಡದೇ ಗುರುಮಠಕಲ್ ಮತ ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ಧಿ ಮತ್ತು ಪಟ್ಣಣದ ಹಲವಾರು ಯೋಜನೆಗಳ ಬಗ್ಗೆ ದನಿ ಎತ್ತಿ, ಈ ಭಾಗಕ್ಕೆ ನ್ಯಾಯ ಒದಗಿಸುವ ಪಕ್ಷಕ್ಕೆ ಬೆಂಬಲ ನೀಡಬೇಕಾಗಿದೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆದೇಶದಂತೆ ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ಗುರುಮಠಕಲ್ ಮತಕ್ಷೇತ್ರದಿಂದ ಬೆಂಬಲ ನೀಡಲಾಗಿತ್ತು. ಈಗ ಮತ್ತೆ ಅದೇ ಪರಿಸ್ಥಿತಿ ಬಂದಿದೆ. ಹಲವಾರು ದಶಕಗಳಿಂದ ರಾಜಕೀಯವಾಗಿ ವಿರೋಧಿಸಿಕೊಂಡ ಬಂದ ಪಕ್ಷಕ್ಕೆ ಬೆಂಬಲ ನೀಡಬೇಕಾ ಬೇಡವಾ ಎಂಬ ಪ್ರಶ್ನೆ ಎದುರಾಗಿದೆ.
ಯಾದಗಿರಿ ಮತ್ತು ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಸುಮಾರು 500ಕ್ಕೂ ಹೆಚ್ಚು ಚುನಾಯಿತ ಸದಸ್ಯರನ್ನು ಹೊಂದಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯದ ನಿಮಿತ್ತ ಜೆಡಿಎಸ್ ಹೈಕಮಾಂಡ್ ಆದೇಶ ನೀಡುವ ತನಕ ತಟಸ್ಥವಾಗಿರುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪುರಸಭೆ ಉಪಾಧ್ಯಕ್ಷರು, ಸದಸ್ಯರು ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.