ಯಾದಗಿರಿ:ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನ ಸರ್ಕಾರದ ವತಿಯಿಂದ ಆಚರಿಸಬೇಕು ಎಂದು ಜಿಲ್ಲಾ ವಿಶ್ವಕರ್ಮ ಮಹಾಸಭಾ ಮುಖಂಡರು ಸುದ್ದಿಗೋಷ್ಠಿ ನಡೆಸುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಕರ್ಮ ಮಹಾಸಭಾದ ಆನಂದ ವಿಶ್ವಕರ್ಮ, ಶ್ರೀ ರಮೇಶ ಹತ್ತಿಕುಣಿ ಸೇರಿದಂತೆ ಹಲವು ಮುಖಂಡರು, ಕರ್ನಾಟಕ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಅಮರಶಿಲ್ಪಿ ಜಕಣಾಚಾರಿ ಅವರನ್ನ ಸ್ಮರಿಸಬೇಕಾದುದು ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.
ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ 2015-16ನೇ ಸಾಲಿನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ರಚನೆ ಮಾಡಲಾಯಿತು. ನಂತರ ಸಿಎಂ ಯಡಿಯೂರಪ್ಪ ವಿಶ್ವಕರ್ಮ ಸಮಾಜಕ್ಕೆ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲು ಸರ್ಕಾರದಿಂದ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಜಕಣಾಚಾರಿ ಅವರ ಸಂಸ್ಮರಣಾ ದಿನವನ್ನ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಕರ್ನಾಟಕದ ಯಾವುದಾದರೊಂದು ವಿಶ್ವವಿದ್ಯಾಲಯ ಇಲ್ಲವೇ ಲಲಿತಕಲಾ ವಿಶ್ವವಿದ್ಯಾಲಯಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕೆಂದು ವಿಶ್ವಕರ್ಮ ಮಹಾಸಭಾ ಸಿಎಂ ಅವರನ್ನ ಒತ್ತಾಯಿಸಿದೆ.