ಸುರಪುರ (ಯಾದಗಿರಿ): ತಡರಾತ್ರಿ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2.17 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಳೆದ ಅನೇಕ ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆ ದೊಡ್ಡ ಅವಾಂತರವನ್ನು ಸೃಷ್ಟಿಸಿದೆ. ಅಲ್ಲದೆ ಎಲ್ಲ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.
ಅದರಂತೆ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬೃಹತ್ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದರು ಕಳೆದ ಮೂರ್ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಅಧಿಕ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ನಾರಾಯಣಪುರದ ಬಸವಸಾಗರ ಜಲಾಶಯ ಕೂಡ ಭರ್ತಿಯಾಗಿದ್ದು ಹೆಚ್ಚಿನ ನೀರು ಕೃಷ್ಣ ನದಿಗೆ ಹರಿಬಿಡಲಾಗಿದೆ.