ಯಾದಗಿರಿ: ಲೋಕೊಪಯೋಗಿ ಇಲಾಖೆಯ ಎ.ಇ.ಇ ಹಾಗೂ ಜೆ.ಇ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದಲ್ಲಿರುವ ಉಮೇಶ್ಗೆ ಸೇರಿದ ಜಮೀನಿನಲ್ಲಿ ಅನುಮತಿಯಿಲ್ಲದೆ ಸಿಸಿ ರಸ್ತೆ ನಿರ್ಮಿಸಿ ಹೊಲದ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಉಮೇಶ ಮುದ್ನಾಳ ಹೆಚ್.ಕೆ.ಆರ್.ಡಿ.ಬಿ ಅನುದಾನದಡಿಯಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಮಾಡುವ ಭರಾಟೆಯಲ್ಲಿ ನನ್ನ ಜಾಗವನ್ನು ಅತಿಕ್ರಮಿಸಿದ್ದಾರೆ. ಹೀಗಾಗಿ ಮೇಲಾಧಿಕಾರಿಗಳು ಸೂಕ್ತ ಗಮನ ಹರಿಸಿ ಎ.ಇ.ಇ ಹಾಗೂ ಜೆ.ಇಗಳನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಈ ವಿಷಯದ ಕುರಿತು ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಅವರು ಕೂಡ ಅಧಿಕಾರಿಗಳಿಗೆ ರಸ್ತೆ ನಿರ್ಮಾಣ ಮಾಡದಂತೆ ತಾಕೀತು ಮಾಡಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳನ್ನು ಧಿಕ್ಕರಿಸಿ ನಾನು ಊರಲ್ಲಿ ಇಲ್ಲದ ಸಮಯ ನೋಡಿಕೊಂಡು ರಸ್ತೆ ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ರಾಜಕೀಯ ಮುಖಂಡರ ಕುತಂತ್ರ ಅಡಗಿದ್ದು, ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.