ಗುರುಮಠಕಲ್: ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ಶುಕ್ರವಾರ (ಮೇ 13) ರಾತ್ರಿ ನೇಣು ಬಿಗಿದು ಪತ್ನಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸೋಮವಾರ ಗುರುಮಠಕಲ್ ಪೊಲೀಸರು ಬಂಧಿಸಿದ್ದಾರೆ. ಪಾರ್ವತಿ ಮೃತ ಮಹಿಳೆ, ಪಿ. ಭೀಮರಾಯ ಭಂಗಿ ಬಂಧಿತ ಆರೋಪಿ.
ಪಾರ್ವತಿ ಹಾಗೂ ಭೀಮರಾಯ ಭಂಗಿಗೆ ಕಳೆದ ವರ್ಷ ಮದುವೆಯಾಗಿತ್ತು. ಅಡುಗೆ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಆಗಾಗ ಭೀಮರಾಯ ಜಗಳ ಮಾಡುತ್ತಿದ್ದ. ಎರಡು ತಿಂಗಳ ಹಿಂದೆ ಅಡುಗೆ ಕಲಿತು ಬರುವಂತೆ ಪತ್ನಿಯನ್ನು ಆಕೆಯ ತವರು ಮನೆ ಸೌರಾಷ್ಟ್ರ ಹಳ್ಳಿಗೆ ಬಿಟ್ಟು ಬಂದಿದ್ದ, ಬಳಿಕ ಕೆಲ ದಿನಗಳ ಹಿಂದೆ ವಾಪಸ್ ಕರೆತಂದಿದ್ದ.
ತಮ್ಮ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ನಂತರ ಮನೆಯ ಛಾವಣಿಯಲ್ಲಿ ಮಲಗಲು ಹೋದಾಗ ಮತ್ತೆ ಇಬ್ಬರ ನಡುವೆ ಜಗಳವಾಗಿದ್ದು, ಪಕ್ಕದಲ್ಲಿದ್ದ ಕಾಟನ್ ಬಟ್ಟೆಯ ದಾರದಿಂದ ಬಿಗಿದು ಕೊಲೆ ಮಾಡಿದ್ದಾನೆ. ಮಧ್ಯರಾತ್ರಿಯಿಂದ ಬೆಳಗ್ಗೆವರೆಗೂ ಹೆಂಡತಿಯ ಶವದ ಪಕ್ಕದಲ್ಲೇ ಮಲಗಿದ್ದ ಪತಿರಾಯ, ಎನೋ ಆಗಿದೆ ಎಂದು ಸುಳ್ಳು ಕಥೆ ಕಟ್ಟಿ ಎಲ್ಲರ ದಾರಿ ತಪ್ಪಿಸಿಲು ಪ್ರಯತ್ನಿಸಿದ್ದಾನೆ.
ಆದರೆ, ಮೃತ ಪಾರ್ವತಿಯ ಕತ್ತಿನ ಮೇಲೆ ದಾರದ ಗುರುತನ್ನು ಸ್ಥಳೀಯರು ಗಮನಿಸಿದ್ದರಿಂದ ತಲೆಮರೆಸಿಕೊಂಡಿದ್ದ. ವಿಷಯ ತಿಳಿದು ಮೃತಳ ತಂದೆ ಅಂಜನೇಯ ಗುರುಮಠಕಲ್ ಠಾಣೆಗೆ ದೂರು ನೀಡಿದ್ದರು. ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಡಿವೈಎಸ್ಪಿ ವೀರೇಶ ಕರಿಗುಡ್ಡ ಅವರ ಮಾರ್ಗದರ್ಶನದಲ್ಲಿ ಗುರುಮಠಕಲ್ ಪೊಲೀಸರ ತಂಡ ಆರೋಪಿಯನ್ನು ಕಂದಕೂರ ಗ್ರಾಮದ ಬಳಿ ಪತ್ತೆಹಚ್ಚಿ ಬಂಧಿಸಿದ್ದು, ನ್ಯಾಯಾಂಗ ಬಂಧನದಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಖಾಜಾಹುಸೇನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಪ್ರತಿಷ್ಠಿತ ಶಾಲಾ ವಿದ್ಯಾರ್ಥಿನಿಯರ ಹೊಡೆದಾಟ! ವಿಡಿಯೋ ವೈರಲ್