ಯಾದಗಿರಿ:ಬುಧವಾರ ತಡರಾತ್ರಿಸುರಿದ ಭಾರೀ ಮಳೆಗೆ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಯಾದಗಿರಿ ತಾಲೂಕಿನ ಕೊಯಿಲೂರು ಗ್ರಾಮವು ಸಂಪೂರ್ಣ ಜಲಾವೃತವಾಗಿದೆ.
ಮಳೆ ನೀರು ಗ್ರಾಮದ ಜನರಿಗೆ ದಿಗ್ಬಂಧನ ಹಾಕಿದೆ. ಕೊಯಿಲೂರು ಗ್ರಾಮದಲ್ಲಿ 80 ಕ್ಕೂ ಮನೆಗಳಿಗೆ ನೀರು ನುಗ್ಗಿದ್ದು ಜನರು ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ವರುಣನ ಅಬ್ಬರದಿಂದ ನಲುಗಿದ ಯಾದಗಿರಿ ಜನತೆ ಹಳ್ಳದ ಪಕ್ಕದಲ್ಲಿರುವ ಜನರು ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ನೀರಿನಲ್ಲಿ ಸಿಲುಕಿದ ಮಗು ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ಗ್ರಾಮದ ಯುವಕರ ತಂಡವು ರಕ್ಷಣೆ ಮಾಡಿದೆ. ಹಗ್ಗದ ಸಹಾಯದಿಂದ ಮಗು ಸೇರಿದಂತೆ ಜನರ ಪ್ರಾಣ ಉಳಿಸಿದೆ.
ಗ್ರಾಮದ ಕೆರೆ ತುಂಬಿ ಹಳ್ಳಕ್ಕೆ ನೀರು ಭಾರೀ ಪ್ರಮಾಣದಲ್ಲಿ ಹರಿಯುತ್ತಿದ್ದು, ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದೆ. ಕೊಯಿಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ ವಡಗೇರಾ ತಾಲೂಕಿನ ಕೊನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಅಧಿಕಾರಿಗಳು ಕೂಡಲೇ ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯ ಮಾಡಬೇಕಿದೆ.