ಯಾದಗಿರಿ:ಜಿಲ್ಲೆಯಾದ್ಯಂತ ನಿನ್ನೆ ರಾತ್ರಿಯಿಂದ ಭಾರಿ ಮಳೆಯಾದ ಹಿನ್ನೆಲೆ ಸುರಪುರ ನಗರದ ವಣಕಿಹಾಳ್ ಬಡಾವಣೆ ಸಂಪೂರ್ಣ ಜಲಾವೃತವಾಗಿದೆ.
ಮಳೆ ಅಬ್ಬರಕ್ಕೆ ತುಂಬಿದ ವಣಕಿಹಾಳ್ ಕೆರೆ, ನೂರಾರು ಮನೆಗಳು, ಶಾಲೆ ಜಲಾವೃತ - ವಣಕಿಹಾಳ್ ಕೆರೆ ಭರ್ತಿ
ಯಾದಗಿರಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಸುರಪುರ ತಾಲೂಕಿನಲ್ಲಿ ಬಡಾವಣೆಗಳು ಜಲಾವೃತಗೊಂಡಿವೆ.ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ರಾತ್ರಿಯಿಂದಲೇ ಹೊರಗೆ ಇದ್ದಾರೆ.
ಸುರಪುರ ನಗರಸಭೆ ವ್ಯಾಪ್ತಿಯ ಬಡಾವಣೆ ಇದಾಗಿದ್ದು, ಮಳೆಯ ಆರ್ಭಟಕ್ಕೆ ವಣಕಿಹಾಳ್ ಕೆರೆ ಕೋಡಿ ಒಡೆದು ಬಡಾವಣೆಗೆ ನೀರು ನುಗ್ಗಿದ್ದರಿಂದ ನೂರಾರು ಮನೆಗಳಿರುವ ಬಡಾವಣೆಯಲ್ಲಿನ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ ಅಲ್ಲದೆ ಸರ್ಕಾರಿ ಶಾಲೆಯೂ ಸಂಪೂರ್ಣ ಜಲಾವೃತಗೊಂಡಿದೆ.
ಮಳೆಯಿಂದಾಗಿ ನಿನ್ನೆ ರಾತ್ರಿಯಿಂದ ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಗೆ ಉಳಿದಿದ್ದಾರೆ. ಮನೆಯಲ್ಲಿರುವ ದವಸ ಧಾನ್ಯಗಳು ಸಂಪೂರ್ಣ ನೀರು ಪಾಲಾಗಿವೆ. ಹೀಗಾಗಿ ತಿನ್ನಲು ಅನ್ನವೂ ಇಲ್ಲದ ದುಸ್ಥಿತಿ ಎದುರಾಗಿದೆ.ಇಷ್ಟೆಲ್ಲ ಅವಾಂತರ ಸೃಷ್ಟಿಯಾದ್ರೂ ಸ್ಥಳಕ್ಕೆ ಅಧಿಕಾರಿಗಳು ಬಾರದಿರುವುದಕ್ಕೆ ಸಂತ್ರಸ್ತರು ಆಕ್ರೋಶಗೊಂಡಿದ್ದಾರೆ.