ಯಾದಗಿರಿ: ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗುವ ಮೂಲಕ ಗ್ರಾಮಾಂತರ ಪ್ರದೇಶದ ಜನ ಮನೆ ಮಠ ಕಳೆದುಕೊಂಡು ಸಂಕಷ್ಟ ಅನುಭವಿಸುವಂತಾಯಿತು.
ಜಿಲ್ಲೆಯ ಶಹಪುರ ತಾಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇಂದು ಮೂರು ಮನೆಗಳ ಗೋಡೆ ಕುಸಿದು ಬಿದ್ದಿದ್ದರಿಂದ ಹಲವು ಕುಟುಂಬಗಳು ಬೀದಿಗೆ ಬೀಳುವಂತಾಯಿತು. ಈ ಹಿಂದೆ ಸುರಿದ ಮಳೆಗೆ ಗ್ರಾಮದ ಹಲವು ಮನೆಗಳ ಗೋಡೆ ಕುಸಿದು ಸಂಕಷ್ಟದಲ್ಲಿದ್ದ ಗ್ರಾಮಸ್ಥರಿಗೆ ಮಳೆರಾಯ ಗಾಯದ ಮೇಲೆ ಬರೆ ಎಳೆದಿದ್ದಾನೆ.
ಯಾದಗಿರಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಗ್ರಾಮಾಂತರ ಪ್ರದೇಶದ ಜನ ಮನೆ ಮಠ ಕಳೆದುಕೊಳ್ಳುವಂತಾಗಿದೆ. ಗ್ರಾಮದಲ್ಲಿ ಇಲ್ಲಿಯವರೆಗೆ 16 ಮನೆಗಳು ಕುಸಿದು ಬಿದ್ದಿದ್ದು, ಮಳೆಯಿಂದ ತತ್ತರಿಸಿದ ಗ್ರಾಮಸ್ಥರ ಗೋಳು ಕೇಳಲು ಯಾವೊಬ್ಬ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ತಮಗಾದ ಹಾನಿ ಭರಿಸಿಕೊಡಬೇಕು ಎಂದು ಮನೆ ಕಳೆದುಕೊಂಡ ನಿರಾಶ್ರಿತರು ಮನವಿ ಮಾಡಿಕೊಂಡಿದ್ದಾರೆ.
ಬಿಟ್ಟು ಬಿಡದೇ ಮಳೆರಾಯನ ರುದ್ರ ನರ್ತನಕ್ಕೆ ಒಂದೆಡೆ ರೈತ ಬೆಳೆನಷ್ಟ ಅನುಭವಿಸುವಂತಾದರೆ, ಇನ್ನೊಂದೆಡೆ ಭಾರಿ ಮಳೆಗೆ ಜಿಲ್ಲೆಯ ಹಲೆವೆಡೆ ಮನೆ ಕುಸಿದು ಹಲವಾರು ಕುಟುಂಬಗಳು ಬೀದಿಗೆ ಬೀಳುವಂತಾಗಿದೆ.